ಮಾ.24 ಲಯನ್ಸ್ ಕ್ಲಬ್ ನಲ್ಲಿಸೀಳುತುಟಿ ಚಿಕಿತ್ಸಾ ಶಿಬಿರ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.21: ಇಲ್ಲಿನ ಲಯನ್ಸ್ ಕ್ಲಬ್ ನಿಂದ  ಸೀಳು ತುಟಿ ಹಾಗೂ ಸೀಳು ನಾಲಿಗೆಯ ಮಕ್ಕಳಿಗೆ  ಉಚಿತ ಶಸ್ತ್ರಚಿಕಿತ್ಸೆ ಶಿಬಿರಕ್ಕೆ  ಮಾ.24 ರಂದು ನಗರದ ಕಪ್ಪಗಲ್ ರಸ್ತೆಯ ಲಯನ್ಸ್ ಕ್ಲಬ್ ನಲ್ಲಿ ಸ್ಕ್ರೀನಿಂಗ್ ಕಾರ್ಯ ನಡೆಯಲಿದೆಂದು ಕ್ಲಬ್ ನ ಅಧ್ಯಕ್ಷ ಸಿದ್ದರಾಮೇಶ್ವರ ಗೌಡ ಅವರು ತಿಳಿಸಿದ್ದಾರೆ.
ಅವರು ನಿನ್ನೆ ನಗರದ ಗೌರಿಹಳ್ಳಿ ಮನೆ ಹೋಟೆಲ್ ಸಭಾಂಗಣದಲ್ಲಿ ಕರೆದಿದ್ದ  ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದರು.
ಲಯನ್ಸ್ ಕ್ಲಬ್ ಕಳೆದ 2004 ರಿಂದಲೂ ಸೀಳುತುಟಿ ಹಾಗೂ ಸೀಳು ನಾಲಿಗೆಯ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳುತ್ತಾ ಬಂದಿದೆ. ಈ ವರೆಗೆ 4 ಸಾವಿರಕ್ಕೂ ಹೆಚ್ಚು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.  ಸಾರ್ವಜನಿಕರಿಗೆ ಸೀಳು ತುಟಿ,  ಸೀಳು ನಾಲಿಗೆಯ ಮಕ್ಕಳು ಕಂಡು ಬಂದಲ್ಲಿ ಶಿಬಿರಕ್ಕೆ ಕಳಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ 9480569117 ಗೆ ಕರೆ ಮಾಡುವಂತೆ  ಮನವಿ ಮಾಡಿದರು.
ಮಾ.24 ರಂದು 15 ಕ್ಕೂ ವೈದ್ಯರಿಂದ  ಲಯನ್ಸ್ ಕ್ಲಬ್ ನಲ್ಲಿ ನಡೆಯುವ ಸ್ಕ್ರೀನಿಂಗ್ ಕಾರ್ಯದಲ್ಲಿ ಆಯ್ಕೆಗೊಳ್ಳುವ ಮಕ್ಕಳನ್ನು ಬೆಳಗಾವಿಯ ಕೆಎಲ್ ಇ ಸಂಸ್ಥೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುವುದು. ಚಿಕಿತ್ಸೆಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.
ಕ್ಲಬ್ ನ ಕಾರ್ಯದರ್ಶಿ ಕಲ್ಯಾಣ ಚಕ್ರವರ್ತಿ, ಖಜಾಂಚಿ ಕಲ್ಲುಕಂಬ ಎರಿಸ್ವಾಮಿ, ರಾಜಶೇಖರ, ಎರಿಸ್ವಾಮಿ, ರವಿ ದೇಸಾಯಿ, ಮಕ್ಕಳ ತಜ್ಞ ಡಾ.ಅಜಯ್, ಡಾ.ಗಡ್ಡಿ ದಿವಾಕರ, ಬಂಗಾರ ಪ್ರಭು ಸುದ್ದಿಗೋಷ್ಟಿಯಲ್ಲಿದ್ದರು.