ಅಧಿಕಾರಿಗಳ ಜೊತೆ ಪರಸ್ಪರ ಸಮನ್ವಯ ಅಗತ್ಯ
ಬಾಗಲಕೋಟೆ, ಮಾ. 21 : ಚುನಾವಣೆ ಕಾರ್ಯಕ್ಕೆ ನೇಮಿಸಲಾದ ವಿವಿಧ ಅಧಿಕಾರಿಗಳ ನಡುವೆ ಪರಸ್ಪರ ಸಮನ್ವಯ ಅಗ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಆಗಿರುವ ಬಾಗಲಕೋಟೆ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸಂತೋಷ ಜಗಲಾಸರ ಹೇಳಿದರು.
ತಾಲೂಕಾ ತಹಶೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೆಕ್ಟರ ಅಧಿಕಾರಿಗಳಿಗೆ ಮತಗಟ್ಟೆ ಅಧಿಕಾರಿಗಳು, ಮತಗಟ್ಟೆ ಮಟ್ಟದ ಮೇಲ್ವಿಚಾರಕರ ನಡುವೆ ಸಮನ್ವಯತೆ ಇದ್ದರೆ ಮಾತ್ರ ಕೆಲಸಗಳು ನಡೆಯಲು ಸಾಧ್ಯವಾಗುತ್ತದೆ. ಆದ್ದರಿಂದ ಮತದಾನ ಮಾಡುವ ದಿನಾಂಕದಿಂದ ಮೊದಲೇ ಮತಗಟ್ಟೆಗೆ ಸಂಬಂಧಿಸಿದ ಅಧಿಕಾರಿಗಳು ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲು ಸೂಚಿಸಿದರು.
ಮತಗಟ್ಟೆ ಮಟ್ಟದ ಮೇಲ್ವಿಚಾರಕರು 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲ ಮತದಾರರ ಮಾಹಿತಿಯನ್ನು ಸೆಕ್ಟರ ಅಧಿಕಾರಿಗಳಿಗೆ ನೀಡಬೇಕು. ಮನೆಯಲ್ಲಿ ಮತದಾನ ಮತ್ತು ಮತಗಟ್ಟೆಗೆ ಹೋಗಿ ಮತದಾನ ಮಾಡುವುದು ಇದ್ದು, ಈ ಎಡರು ವಿಧದ ಮತದಾರರ ಮಾಹಿತಿ ಆಧಾರ ಮೇಲೆ ರೂಟನ್ನು ನಿರ್ಧರಿಸಲು ತಿಳಿಸಿದರು. ಇವೆಲ್ಲ ಕಾರ್ಯ ಮತದಾನ ನಡೆಯುವ ಪೂರ್ವದಲ್ಲಿ ಆಗಬೇಕಿದೆ. ಸೆಕ್ಟರ ಅಧಿಕಾರಿಗಳು 12 ನಮೂನೆಯನ್ನು 85 ವರ್ಷ ಮೇಲ್ಪಟ್ಟ ಮತ್ತು ಅಂವಿಕಲ ಮತದಾರರಿಗೆ ವಿತರಿಸುವ ಸಮಯದಲ್ಲಿ ಮತಗಟ್ಟೆ ಅಧಿಕಾರಿಗಳು ಜೊತೆಗೆ ಕಾರ್ಯನಿರ್ವಹಿಸಲು ತಿಳಿಸಿದರು.
ಶಾಲೆಗಳಲ್ಲಿ ಶೌಚಾಲಯ ಶುಚಿಗೊಳಿಸುವುದು ಮತ್ತು ಪೀಠೋಪಕರಣಗಳನ್ನು ಕಾಪಾಡುವುದು, ನೀರಿನ ಸರಬರಾಜು ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ಕಾಪಾಡುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಿದೆ. ಮತಗಟ್ಟೆ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸದ ಬಗ್ಗೆ ತಹಶೀಲ್ದಾರ ಸಭೆಗೆ ತಿಳಿಸಿದಾಗ ಮತಗಟ್ಟೆಗೆ ಸಂಬಂಧಿಸಿದ ಅಧಿಕಾರಿಗಳು ಕರ್ತವ್ಯದಲ್ಲಿ ನಿಷ್ಕಾಳಜಿ ತೋರಿದಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಚುನಾವಣೆ ಕಾರ್ಯದಲ್ಲಿ ನೀಡಲಾದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಚುನಾವಣೆಯನ್ನು ಯಶಸ್ವಿಗೊಳಿಸಲು ತಿಳಿಸಿದರು.
ಸಭೆಯಲ್ಲಿ ತಹಶೀಲ್ದಾರ ಅಮರೇಶ ಪಮ್ಮಾರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಜೀವನಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡಮನಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ದಸ್ತಗಿರಿಸಾಬ ಮುಲ್ಲಾ ಸೇರಿದಂತೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.