ಜೆಡಿಎಸ್ ಒಟ್ಟಿಗೆ ಕೆಲಸ ಮಾಡಲಿದೆ: ಅಶ್ವತ್ಥನಾರಾಯಣ್
ಸಂಜೆವಾಣಿ ನ್ಯೂಸ್
ಮೈಸೂರು.ಮಾ.21:- ಬಿಜೆಪಿ -ಜೆಡಿಎಸ್ ಮೈತ್ರಿ ವಿಚಾರದಲ್ಲಿ ಅಸಮಧಾನ ಇದ್ದರೂ ನಾವು ಒಟ್ಟಿಗೆ ಕೆಲಸ ಮಾಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು, ಕೆಲವೊಮ್ಮೆ ಸಣ್ಣ ಪುಟ್ಟ ವ್ಯತ್ಯಾಸವಾದರೂ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬುದೇ ನಮ್ಮೆಲ್ಲರ ಗುರಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಹೇಳಿದರು.ನಗರದ ಹೆಬ್ಬಾಳ್ ನಲ್ಲಿರುವ ಆದಿಚುಂಚನಗಿರಿ ಶಾಖಾ ಮಠಕ್ಕೆ ಬುಧವಾರ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಸೀಟು ಹಂಚಿಕೆ ವಿಚಾರದಲ್ಲಿ ಕೇಂದ್ರದ ನಾಯಕರು ಮಾತನಾಡುತ್ತಿದ್ದಾರೆ. ಎಷ್ಟು ಸೀಟು ಜೆಡಿಎಸ್ ಗೆ ಬಿಟ್ಟುಕೊಡಬೇಕು ಎಂಬುದರ ಬಗ್ಗೆ ನಮಗೆ ಗೊತ್ತಿಲ್ಲ. ಅದನ್ನೆಲ್ಲಾ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಸೀಟು ಹಂಚಿಕೆ ವಿಚಾರದಲ್ಲಿ ಮೊನ್ನೆ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದರೂ, ನಿನ್ನೆ ನಾವೆಲ್ಲಾ ಒಟ್ಟಿಗೆ ಹೋಗುತ್ತೇವೆ ಎಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವರಿಗೆ ಟಿಕೆಟ್ ಸಿಗದಿದ್ದಾಗ ಇಂತಹ ಅಭಿಪ್ರಾಯಗಳು ವ್ಯಕ್ತವಾಗುತ್ತದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೆ ದೈವ ನಾಯಕ ಮೋದಿ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಅವರು ಅದೇ ರೀತಿ ನಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಮಂಡ್ಯದಲ್ಲಿ ಸುಮಲತಾ ಅತಂತ್ರರಾದರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ್, ಈಗಾಗಲೇ ಸುಮಲತಾ ನಾನು ಬಿಜೆಪಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಅವರಿಗೂ ಮೋದಿ ಪ್ರಧಾನಿಯಾಗಬೇಕು ಎಂಬುದಿದೆ. ಅವರಲ್ಲೂ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.
ಮೈಸೂರು ಮಹರಾಜರ ಕೊಡುಗೆ ದೇಶ ವಿದೇಶಕ್ಕೂ ಗೊತ್ತಿದೆ. ಮೈಶೂರಿನ ಪ್ರತಿಮನೆಯವರು ರಾಜಮನೆತನಕ್ಕೆ ಗೌರವ ಕೊಡುತ್ತಾರೆ. ಹಾಗಾಗಿ ಎಲ್ಲಾ ಜಾತಿ, ಧರ್ಮದವರು ಯದುವೀರ್ ಅವರಿಗೆ ಆಶೀರ್ವಾದ ಮಾಡಲಿದ್ದಾರೆ. ನಿಸ್ಸಂಶಯವಾಗಿ ನಾವು ಗೆಲುವು ಸಾಧಿಸುತ್ತೇವೆ. ದೇಶಕ್ಕೆ ಮೋದಿ ಮೈಸೂರಿಗೆ ಯದುವೀರ್ ಎಂದು ಹೇಳಿದರು.
ಸಂಸದ ಪ್ರತಾಪ ಸಿಂಹ ಬಹಳಷ್ಟು ಅಭುವೃದ್ಧಿ ಮಾಡಿದ್ದಾರೆ. ಟಿಕೆಟ್ ಸಿಕ್ಕದಿರುವ ಬಗ್ಗೆ ಸ್ವಲ್ಪ ಬೇಸರ ಇರಬಹುದು. ಆದರೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ತಾವು ಮಾಡಿರುವ ಅಭಿವೃದ್ಧಿಯನ್ನು ಪ್ರಬಲವಾಗಿ ಹೇಳುತ್ತಿದ್ದಾರೆ. ಇದರ ಬಗ್ಗೆ ತಪ್ಪಾಗಿ ಅರ್ಥೈಸಬಾರದು ಎಂದು ಹೇಳಿದರು.
ಈಶ್ವರಪ್ಪ ಬಂಡಾಯ ಕುರಿತು ಮಾತನಾಡಿದ ಅವರು, ಕೆಲವೊಮ್ಮೆ ರಾಜಕಾರಣದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಆಗುತ್ತದೆ. ಅವರ ಉದ್ದೇಶ ಕೂಡ ಮೋದಿ ಪ್ರಧಾನಿಯಾಗಬೇಕು ಎಂಬುದಿದೆ. ಅವರ ಬಂಡಾಯದಿಂದ ಸಣ್ಣ ಮಟ್ಟದಲ್ಲಿ ತೊಂದರೆಯಾಗಬಹುದು. ಆದರೆ ನಾಯಕರುಗಳು ಮಾತನಾಡಿ ಅದನ್ನು ಶಮನಗೊಳಿಸಲಿದ್ದಾರೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು, ಆ ಪಕ್ಷಕ್ಕೆ ಹೋಗಬೇಕು ಎನ್ನುವವರು ಮುಳುಗುತ್ತಾರೆ. ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಬಿಟ್ಟು ಹೋಡಿ ಹೋಗುತ್ತಿದ್ದಾರೆ.ರಾಜ್ಯದಲ್ಲಿಯೂ ಹೋಡಿ ಹೋಗಲಿದ್ದಾರೆ. ಇಂತಹ ಮುಳುಗುವ ಹಡಗಿಗೆ ಯಾರು ಹೋಗುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಇಡೀ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು.
ವೀಕ್ ಪಿಎಂ ಎಂಬ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟ ಅಶ್ವತ್ಥನಾರಾಯಣ್, ಯಾರು ವೀಕ್ ಎಂಬುದು ಜನರಿಗೆ ಗೊತ್ತಿದೆ. ಸಿದ್ಧರಾಮಯ್ಯ ಅವರ ಸಂಪುಟದಲ್ಲೇ ಹಲವರು ನಾನು ಮುಂದಿನ ಮುಖ್ಯಮಂತ್ರಿ, ಈಗಲೇ ಮುಖ್ತಮಂತ್ರಿಯಾಗುತ್ತೇನೆ ಎಂಬ ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿಯಾದ ಸಿದ್ಧರಾಮಯ್ಯ ಕಣ್ಣು ಬಿಟ್ಟುಕೊಂಡು ನೀಡುತ್ತಾ ಕುಳಿತಿದ್ದಾರೆಯೇ ಹೊರತು ಅವರ ವಿರುದ್ಧ ಕ್ರಮ ಜರುಗಿಸಿದ್ದಾರೆಯೇ? 2013 ರಲ್ಲಿ ಮುಖ್ಯಮಂತ್ರಿದ್ದ ರೀತಿಯಲ್ಲಿ ಸಿದ್ಧರಾಮಯ್ಯ ಈಗ ಇದ್ದಾರ ಎಂಬುದನ್ನು ನೀಡಿಕೊಳ್ಳಲಿ. ಆಗ ಯಾರು ವೀಕ್ ಯಾರು ಸ್ಟ್ರಾಂಗ್ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು.