ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ; ಡಿ.ಬಸವರಾಜ್

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.20: ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಬರ ಪರಿಹಾರ ಹಣ ನೀಡುತ್ತಿಲ್ಲ. ಜಿಎಸ್ ಟಿ ಹಣ ಕೊಡುತ್ತಿಲ್ಲ. ಆದ್ರೆ ಚುನಾವಣೆಯಲ್ಲಿ ಮತ ಕೇಳಲು ಮಾತ್ರ  ಪ್ರಧಾನಿ ಮೋದಿ ಕರ್ನಾಟಕಕ್ಕೆ ಬರುತ್ತಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಕಷ್ಟವಿದ್ದಾಗ ಮೋದಿಗೆ ಕರ್ನಾಟಕ ನೆನಪಿರುವುದೇ ಇಲ್ಲ ಆದರೆ, ಚುನಾವಣೆಗಳು ಬಂದಾಗ ಮಾತ್ರ ಮೋದಿ ಅವರು ರಾಜ್ಯಕ್ಕೆ ಬರುತ್ತಾರೆ. ಇದನ್ನ ಪ್ರಜ್ಞಾವಂತ ಕನ್ನಡಿಗರು ಗಮನಿಸುತ್ತಿದ್ದು,  ಇವರ ಮೊಸಳೆ ಕಣ್ಣೀರಿನ ಗುಣಕ್ಕೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.ಮೂರನೇ ಬಾರಿ ಮೋದಿ ಪ್ರಧಾನಿ ಆಗಬೇಕು ಎನ್ನುತ್ತಿದ್ದಾರೆ. ಇವರ ಸಾಧನೆ ಶೂನ್ಯ. ಈಗಾಗಲೇ ರಾಜ್ಯದ ಕಲಬುರ್ಗಿ ಹಾಗೂ ಶಿವಮೊಗ್ಗದಲ್ಲಿ‌ ಚುನಾವಣಾ ಪ್ರಚಾರ ಮಾಡಿದ್ದಾರೆ. ಇಲ್ಲ ಸಲ್ಲದ ಹೇಳಿಕೆ ನೀಡಿ ದೇಶದಲ್ಲಿ ಕೋಮು ಭಾವನೆ ಕೆರಳಿಸುವುದು ಬಿಜೆಪಿ ಜಾಯಮಾನವಾಗಿದೆ ಎಂದು ಹೇಳಿದರು.ದೇಶದಲ್ಲಿ ಆಪರೇಷನ್ ಕಮಲ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ್ದು ಬಿಜೆಪಿ. ಲಂಚ ಪಡೆದು ಅಧಿಕಾರದಲ್ಲಿದ್ದ ಸಿಎಂ ಜೈಲು ಸೇರಿದ್ದು ಬಿಜೆಪಿ ಸಾಧನೆ. 40 ರಷ್ಟು ಕಮಿಷನ್ ಪಡೆದು ರಾಜ್ಯದ ಗೌರವವನ್ನ ರಾಷ್ಟ್ರ ಮಟ್ಟದಲ್ಲಿ ಹಾಳು ಮಾಡಿದ್ದು ಬಿಜೆಪಿ ನಿಜ ಅರ್ಥದಲ್ಲಿ ಬಿಜೆಪಿಯ ಕಾಲ್ಗುಣ ಸರಿಯಿಲ್ಲ. ಜನ ಬಿಜೆಪಿಯನ್ನು ಮರೆಯುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ. ದೇಶದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಅಧಿಕಾರಕ್ಕೆ ಬರಲಿದೆ. ಚುನಾವಣಾ ಬಾಂಡ್ ವಿಚಾರದಲ್ಲಿ  ದೇಶದ ಜನರ ಮುಂದೆ ಮೋದಿ ಬೆತ್ತಲೆಯಾಗಿದ್ದಾರೆ ಎಂದು ಅವರು ಟೀಕಿಸಿದರು.ಗೋಷ್ಠಿಯಲ್ಲಿ ಎಸ್.ಎಂ.ಜಯಪ್ರಕಾಶ್, ಬಿ.ವಿನಾಯಕ್, ಎಂ.ಕೆ.ಲಿಯಾಕತ್ ಅಲಿ, ಮಹಮದ್ ಜಿಕ್ರಿಯಾ, ಬಿ.ಶಿವಕುಮಾರ್ ಇತರರು ಇದ್ದರು.