ವಿಶ್ವ ಅರಣ್ಯ ದಿನದ ಸಂದೇಶ ಸಾರಿದ ನಾಗಠಾಣದ ಚಿಣ್ಣರು
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.21: ಅರಣ್ಯವೆನ್ನುವುದು ಭೂಮಿಯ ಬಹುದೊಡ್ಡ ಸಂಪತ್ತು. ಲಕ್ಷಾಂತರ ಬೆಲೆಬಾಳುವ ಮರ ಗಿಡಗಳನ್ನು ಒಳಗೊಂಡಿರುವ ಸ್ಥಳ. ಅನೇಕ ಜೀವರಾಶಿಗಳಿಗೆ ಆಸರೆಯಾದ ತಾಣ. ಮಾರ್ಚ್ 21 ವಿಶ್ವ ಅರಣ್ಯ ದಿನ. ಮನುಷ್ಯ ಜೀವನದ ಮೊದಲ ಘಟ್ಟ ಆರಂಭವಾದದ್ದು ಕಾಡಿನಿಂದ. ಬದುಕಲು ಬೇಕಾಗುವ ಎಲ್ಲ ಮೂಲ ಸೌಕರ್ಯಗಳನ್ನು ಕಾಡು ಒದಗಿಸಿತ್ತು. ಅಲ್ಲಿಂದ ಆರಂಭವಾದ ಕಾಡು ಮತ್ತು ಮನುಷ್ಯನ ಸಂಬಂಧ ಇಂದು ಕಾಡುಗಳನ್ನು ನಾಶ ಮಾಡಿ ತನ್ನ ಮೂಲ ಸೌಕರ್ಯಗಳನ್ನು ಹೆಚ್ಚಿಸುವಲ್ಲಿಯವರೆಗೆ ಮುಂದುವರಿದಿದೆ.
ಕುಡಿಯುವ ನೀರಿನಿಂದ ಹಿಡಿದು, ಬರೆಯುವ ಪುಸ್ತಕ, ಕಟ್ಟುವ ಮನೆಯವರೆಗೆ ಎಲ್ಲದರಲ್ಲೂ ಅರಣ್ಯದ ಪಾತ್ರವಿದೆ. ಇವುಗಳ ನಿರ್ಮಾಣಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಕಾಡಿನ ಸಂಪನ್ಮೂಲ ಸಹಕಾರಿ. ಮಳೆ, ಹವಾಮಾನ ಏರುಪೇರು, ಪರಿಸರ ವ್ಯವಸ್ಥೆಗಳಲ್ಲಿ ಅರಣ್ಯದ ಪಾತ್ರ ಮಹತ್ವದ್ದು. ಬಡತನ ನಿರ್ಮೂಲನೆಗೆ ಅರಣ್ಯದ ಕೊಡುಗೆ ಅಪಾರ.
ಕಾಡು ಭೂಮಿಯ ಅತಿ ಪ್ರಮುಖ ಭಾಗ. ಇದು ಜೀವಿಗಳಿಗೆ ನೆರಳು, ಆಹಾರ, ಶುದ್ಧ ನೀರು ಮತ್ತು ಗಾಳಿಯನ್ನು ಒದಗಿಸುತ್ತದೆ. ಇಂದಿನ ಯುಗದಲ್ಲಿ ಅರಣ್ಯದ ನಾಶ ಹೇರಳವಾಗಿ ಉಂಟಾಗುತ್ತಿದೆ. ಕಾಡು ಉಳಿಸುವುದು ಇಂದಿನ ಅನಿವಾರ್ಯಗಳಲ್ಲಿ ಒಂದಾಗಿದೆ. ನಾಶವಾಗುತ್ತಿರುವ ಜೀವಸಂಕುಲಗಳ ಸಂರಕ್ಷಣೆ, ಪರಿಸರದ ಸಮತೋಲನ ನಿರ್ಮಾಣವಾಗಬೇಕಾದರೆ ಕಾಡು ಉಳಿಯಲೇಬೇಕು.
ಈ ವಿಶ್ವ ಅರಣ್ಯ ದಿನದ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಎಲ್.ಕೆ.ಜಿ ವಿದ್ಯಾರ್ಥಿಗಳಾದ ಅನುಶ್ರೀ, ಶ್ರೀನಿಧಿ ಬಂಡೆ ಅವರು ‘ಅರಣ್ಯ ಸಂರಕ್ಷಣೆ’ ಜಾಗೃತಿಯ ವಿವಿಧ ಘೋಷಣೆಗಳನ್ನು ಪ್ರದರ್ಶಿಸಿದರು.