ರಂಜಾನ್ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟ
ಸಂಜೆವಾಣಿ ವಾರ್ತೆ,
ವಿಜಯಪುರ,ಮಾ.21:ವಿಜಯಪುರ ಅನೌಪಚಾರಿಕ ಶಿಕ್ಷಣ ಸಂಸ್ಥೆ, ನಗರ ಸ್ಲಂ ಅಭಿವೃದ್ಧಿ ಸಮಿತಿ ಒಕ್ಕೂಟ(ರಿ), ನಗರ ಸ್ಲಂ ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ (ರಿ) ಹಾಗೂ ಸಹ ಸಂಘಟನೆಗಳ ಸಹಯೋಗದಲ್ಲಿ ಸಂತ ಅನ್ನಮ್ಮನವರ ದೇವಾಲಯ ಸಭಾಂಗಣದಲ್ಲಿ ರಂಜಾನ ಹಬ್ಬದ ಪ್ರಯುಕ್ತ ಇಫ್ತಾರ್ ಕೂಟವನ್ನು ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸಕರಾಗಿ ಆಗಮಿಸಿದ ಜೆ.ಎಸ್. ಪಾಟೀಲ ಶರಣ ಸಾಹಿತಿಗಳು ಮಾತನಾಡಿ, ನಾವೆಲ್ಲರೂ ಸಮಾನರು. ನಮ್ಮಲ್ಲಿ ಯಾಕೆ ಬೇದಭಾವ ಎನಿಸಬೇಕು. ಇತ್ತೀಚಿಗೆ ಧರ್ಮದ ಹೆಸರಿನಲ್ಲಿ ದ್ವೇಷ, ಕೊಲೆಗಳು ನಡೆಯುತ್ತಿವೆ. ಇದು ಸರಿಯೇ ಭಾರತ ದೇಶ ಸಮಾನತೆ ಸಾರುವ ದೇಶ. ಇಲ್ಲಿ ತಲೆತಲಾಂತರದಿಂದ ಹಿಂದು, ಮುಸ್ಲಿಂ, ಸಿಖ್, ಇಸಾಯಿ ಹಮ ಸಬ್ ಭಾಯಿ ಭಾಯಿ ಎಂದು ಬಂಧುತ್ವ ಭಾರತ ಕಟ್ಟಿಕೊಂಡು ಬರುತ್ತಿದ್ದೇವೆ. ಮುಂದೆ ಹೀಗೆ ಸಾಗೋಣ ಎಂದು ಹೇಳಿದರು.
ಇನ್ನೋರ್ವ ಉಪನ್ಯಾಸಕಿ ಜಮಾತೆ ಇಸ್ಲಾಮಿ ಹಿಂದ ಮಹಿಳಾ ಘಟಕ ಸಂಚಾಲಕಿ ಮೇಹಜಬಿನ ಖಾಜಿ ಮಾತನಾಡಿ, ಉಪವಾಸ ಎಂದರೆ ಹಸಿವಿನಿಂದ ಇರುವುದು ಮಾತ್ರವಲ್ಲ ದೇಹದ ಪ್ರತಿಯೊಂದು ಅಂಗಾಗಗಳು ಆರೋಗ್ಯದಿಂದ ಇರಬೇಕು. ದುಶ್ಚಟಗಳಿಗೆ ಕಡಿವಾಣ ಹಾಕುವುದೇ ಉಪವಾಸ ಎಂದು ಹೇಳಿದರು.
ಅನೌಪಚಾರಿಕ ಶಿಕ್ಷಣ ಸಂಸ್ಥೆ ನಿರ್ದೇಶಕ ಫಾದರ್ ಟೀಯೋಲ್ ಅವರು ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷತೆ ವಹಿಸಿದ ಫಾದರ್ ಪ್ರಾಸ್ಸಿಸ್ ಮೇನೆಜಿಸ್ ಮಾತನಾಡಿದರು. ಈ ಸಂದರ್ಭದಲ್ಲಿ ನಗರದ ವಿವಿಧ ಸ್ಲಂಗಳಿಂದ 350ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ವಿಜಯಪುರ ಜಿಲ್ಲಾ ಸಂಚಾಲಕ ಅಕ್ರಂ ಮಾಶ್ಯಾಳಕರ, ರಾಜೇಶ್ವರಿ ಮಠಪತಿ, ಪರ್ಜಾನಾ ಜಮಾದಾರ, ಸುಶೀಲಾಬಾಯಿ ದಳವಾಯಿ, ಸಿದ್ದು ಹೊನಕಟ್ಟಿ ಅವರು ಉಪಸ್ಥಿತರಿದ್ದರು. ಮುತ್ತು ಭೋವಿ ಸ್ವಾಗತಿಸಿದರು ಮಹಾದೇವಿ ರಾಠೋಡ ನಿರೂಪಿಸಿದರು. ಜಯಶ್ರೀ ಚಲುವಾದಿ ವಂದಿಸಿದರು.