ಬಾಡೂಟಕ್ಕೆ ಸಜ್ಜಾಗ್ತಿದೆ ಬೆಣ್ಣೆನಗರಿ: ದುರ್ಗಾಂಬಿಕಾ ದೇವಿ ದರ್ಶನಕ್ಕೆ ಲಕ್ಷಾಂತರ ಮಂದಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೦: ನಗರದ ಶಕ್ತಿದೇವತೆ ದುರ್ಗಾಂಬಿಕೆ ತಾಯಿಯ ಜಾತ್ರಾ ಮಹೋತ್ಸವದ ರಂಗು ಜೋರಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ಸಿಕ್ಕಿದ್ದು, ಇಂದು ಅಂದಾಜಿನ ಪ್ರಕಾರ ಸುಮಾರು 60 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಕಡಿದು ಬಾಡೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದಾಜಿನ ಪ್ರಕಾರ ಜಾತ್ರಾ ಮಹೋತ್ಸವಕ್ಕೆ 12 ಲಕ್ಷಕ್ಕೂ ಅಧಿಕ ಹೆಚ್ಚು ಮಂದಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ದಾವಣಗೆರೆಯ ಹಳೇಪೇಟೆಯಲ್ಲಿ ಎಲ್ಲಿ ನೋಡಿದರೂ ಪೆಂಡಾಲ್ ಹಾಕಿರುವುದು ಕಂಡು ಬರುತ್ತಿದೆ. ಕುರಿಗಳನ್ನು ಈಗಾಗಲೇ ಕಡಿದು ಬಾಡೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಮಟನ್ ಘಮಲು ವಾಸನೆ ಎಲ್ಲೆಡೆ ಬಡಿಯುತ್ತಿದೆ. ಈಗಾಗಲೇ ದುರ್ಗಾಂಬಿಕೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಸಾಲುಗಟ್ಟಲೇ ಜನರು ನಿಂತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಮಂಗಳವಾರದಿಂದಲೇ ತಾಯಿ ದರುಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವುದು ಸಾಮಾನ್ಯವಾಗಿದೆ. ರಾಜ್ಯ ಮಾತ್ರವಲ್ಲ ವಿದೇಶಗಳಿಂದಲೂ ದುರ್ಗಾಂಬಿಕಾ ತಾಯಿ ದರ್ಶನಕ್ಕೆ ಭಕ್ತರು ಆಗಮಿಸಿದ್ದು, ಇಡೀ ದಾವಣಗರೆಯಲ್ಲಿ ಹಬ್ಬದ ಸಂಭ್ರಮ ಕಂಡಹ ಬರುತ್ತಿದೆ. ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಕುರಿ, ಕೋಳಿ, ಮಸಾಲೆ ಪದಾರ್ಥ ಸೇರಿದಂತೆ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆಯುತ್ತಿದೆ. ಒಟ್ಟಿನಲ್ಲಿ ದಾವಣಗೆರೆಯಲ್ಲಿ ಮಟನ್ ಘಮ ಘಮ ಎಲ್ಲೆಡೆ ಪಸರಿಸಿದೆ.