ಲೋಕಸಭಾ ಚುನಾವಣೆ: ಮತದಾನ ಪ್ರಮಾಣ ಹೆಚ್ಚಳಕ್ಕೆ ಪಣ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮಾ.೨೦; ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.70.71ರಷ್ಟು ಮತದಾನವಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಶೇ.5ರಷ್ಟು  ಮತದಾನ ಪ್ರಮಾಣ ಹೆಚ್ಚಳಕ್ಕೆ ರೂಪುರೇಷೆಗಳನ್ನು ಸಿದ್ದಪಡಿಸಲು ಜಿಲ್ಲಾ ಸ್ವೀಪ್ ಸಮಿತಿಯು ನಿರ್ಧರಿಸಿದ್ದು, ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಆಕರ್ಷಣೀಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧಾರ ಕೈಗೊಳ್ಳಲಾಯಿತು.ಲೋಕಸಭಾ ಚುನಾವಣೆ-2024ರ ಸಂಬಂಧ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಸ್ವೀಫ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ವಿಶೇಷವಾಗಿ ನಗರ ಪ್ರದೇಶದಲ್ಲಿ ಮತದಾನ ಜಾಗೃತಿಗಾಗಿ ಜಾಥಾ ಕಾರ್ಯಕ್ರಮ, ಕಲಾತಂಡಗಳು, ಭಿತ್ತಿಪತ್ರಗಳು, ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುವುದು, ಮ್ಯಾರಾಥಾನ್, ವಾಕಾತಾನ್ ಮೂಲಕ ಮತದಾನ ಬಗ್ಗೆ ಅರಿವು ಮೂಡಿಸಲು ನಿರ್ಣಯಿಸಲಾಯಿತು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಕಡಿಮೆ ಮತದಾನ ದಾಖಲಾದ ಸ್ಥಳಗಳಲ್ಲಿ ಮತದಾನ ಹೆಚ್ಚಳಕ್ಕೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮವಹಿಸಬೇಕು ಎಂದು ತಿಳಿಸಿದ ಅವರು, ಪ್ರಾಥಮಿಕವಾಗಿ ಶೇ.50ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ, ವಾರ್ಡ್‍ಗಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಮಾರ್ಚ್ 21 ರಿಂದ 23 ರವರೆಗೆ ಮೂರು ದಿನಗಳ ಕಾಲ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ  ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಶೇ.50ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇರುವ ಮತಗಟ್ಟೆಗಳನ್ನು ವಿಧಾನಸಭಾ ಕ್ಷೇತ್ರವಾರು ಗುರುತಿಸಿ, ಮಹಿಳಾ ಅಧಿಕಾರಿಗಳೇ ಮತದಾನದ ದಿನದಂದು ನಿರ್ವಹಿಸಲು ನಿರ್ಣಯ ಕೈಗೊಳ್ಳಲಾಯಿತು. ಮಹಿಳೆಯರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಹಾಗೂ ಚುನಾವಣಾ ಮುಖ್ಯವಾಹಿನಿಗೆ ಮಹಿಳೆಯರನ್ನು ಸೆಳೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 5 ರಂತೆ ಒಟ್ಟು 30 ಸಖಿ (ಪಿಂಕ್) ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಸಖಿ ಮತಗಟ್ಟೆಗಳ ಜವಾಬ್ದಾರಿ ನಿರ್ವಹಣೆಗಾಗಿ ನಗರಸಭೆ ಪೌರಾಯುಕ್ತರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳು, ವಿಕಲಚೇತನರ ಕಲ್ಯಾಣಾಧಿಕಾರಿಗಳನ್ನೊಳಗೊಂಡ ಉಪಸಮಿತಿಗೆ ಸೂಚಿಸಲಾಯಿತು.  ಹಾಗೆಯೇ ಯುವ ಅಧಿಕಾರಿಗಳನ್ನು ಒಳಗೊಂಡ ತಂಡದಿಂದ ನಿರ್ವಹಿಸಲು “ಯಂಗ್ ಬೂತ್”ಗಳನ್ನು ಗುರುತಿಸಬೇಕು. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 1 ರಂತೆ ಆರು ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 6 “ಯಂಗ್ ಬೂತ್”ಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು.