ಆರ್ ಪಿಐ ಪಕ್ಷದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೦: ಲೋಕಸಭಾ ಚುನಾವಣೆಗೆ ರಿಪಬ್ಲಿಕನ್ ಆಫ್ ಇಂಡಿಯಾ (ಆರ್ ಪಿಐ) ದೇಶದ ಹಲವು ರಾಜ್ಯಗಳಲ್ಲಿ ಹಾಗೂ ಕರ್ನಾಟಕದ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಚುನಾವಣೆ ಪೂರ್ವ ತಯಾರಿಗಾಗಿ 7 ರಾಜ್ಯಗಳಲ್ಲಿ ಪ್ರವಾಸ ಆರಂಭಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಹಾಗೂ ಆರ್ ಪಿಐ ರಾಷ್ಟ್ರಾಧ್ಯಕ್ಷರಾದ ಡಾ.ಎನ್. ಮೂರ್ತಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮೊದಲ ಹಂತವಾಗಿ ಭೀಮಜಾಥಾ ಮಾ. 18 ರಿಂದ ಆರಂಭವಾಗಿದ್ದು, ಏ.1 ರವರೆಗೆ ನಡೆಯಲಿದೆ. ಈ ಜಾಗೃತಿ ಮೂಲಕ ಸಂವಿಧಾನ ಜಾಗೃತಿ, ಆಡಳಿತ ಪಕ್ಷಗಳ ದುರಾಡಳಿತದ ಕುರಿತು ಅರಿವು ಮೂಡಿಸಲಾಗುವುದು ಎಂದರಲ್ಲದೆ, ಜೊತೆಗೆ ಆರ್ ಪಿಐ ಪಕ್ಷದ ಚಿಹ್ನೆ ಪೆನ್ ಆಗಿರುತ್ತದೆ ಎಂದರು.ಏಪ್ರಿಲ್ 15 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರು, ವಸಂತ ನಗರದ  ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ 50ನೇ ವರ್ಷದ ವಜ್ರಮಹೋತ್ಸವ ಐತಿಹಾಸಿಕ ಸಮಾವೇಶ ನಡೆಸಲಾಗುವುದು. ಸಮಾವೇಶದಲ್ಲಿ ದೇಶ ಮತ್ತು ಸಂವಿಧಾನ ಸಂರಕ್ಷಣೆಗಾಗಿ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾವುದು ಎಂದರು.ಆರ್ ಪಿಐ ನಿಂದ ದಾವಣಗೆರೆ ಲೋಕಸಭಾ ಕ್ಷೇತ್ರದಿಂದಲೂ ಚುನಾವಣೆಗೆ ನಿಲ್ಲಲು 5-6 ಆಸಕ್ತರು  ಮುಂದೆ ಬಂದಿದ್ದು, ಇನ್ನೂ ಅಂತಿಮ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ, ದಸಂಸ ಜಿಲ್ಲಾಧ್ಯಕ್ಷ ಹೆಚ್. ಮಂಜುನಾಥ್ ಹಾಗೂ ಸಂಘಟನಾ ಕಾರ್ಯದರ್ಶಿ ಚೌಡಪ್ಪ ಉಪಸ್ಥಿತರಿದ್ದರು.