ಬಾಯಿಯ ಶುಚಿತ್ವ ಮುಖ್ಯ: ಡಾ. ರತಿಕಾಂತ್ ಸ್ವಾಮಿ
ಕಲಬುರಗಿ:ಮಾ.20: ದೇಹದ ಆರೋಗ್ಯಕ್ಕೆ ಬಾಯಿಯೇ ಕೇಂದ್ರವಾಗಿದೆ. ನಾವು ಆರೋಗ್ಯವಂತರಾಗಿರಲು ಬಾಯಿಯನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಮುಖ್ಯವಾಗಿದೆ ಎಂದು ಡಿಹೆಚ್ಓ ಡಾ.ರತಿಕಾಂತ ಸ್ವಾಮಿ ಹೇಳಿದರು.
ಬುಧವಾರ ನಗರದ ಜಿಮ್ಸ್ ಆಸ್ಪತ್ರೆಯ ದಂತ ವಿಭಾಗದ ವತಿಯಿಂದ ಸಂತುಷ್ಟ ಬಾಯಿ, ಸಂತುಷ್ಟ ದೇಹ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಳ್ಳಲಾಗಿದ ‘ವಿಶ್ವ ಬಾಯಿ ಆರೋಗ್ಯ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಾಯಿಯ ಕ್ಯಾನ್ಸರ್ ಸೇರಿದಂತೆ ದೊಡ್ಡ ರೋಗಗಳು ಬಾಯಿಯಿಂದ ಉಂಟಾಗುತ್ತದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಜಿಲ್ಲಾ ಆಸ್ಪತ್ರೆ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ದಂತ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸುವ ಅನೇಕ ಕಾರ್ಯಕ್ರಮಗಳು ಸರಕಾರ ಹಮ್ಮಿಕೊಳ್ಳುತ್ತಿದೆ ಎಂದು ಹೇಳಿದರು.
ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಸಿ.ಆರ್ ಅವರು ಮಾತನಾಡಿ, ಬಾಯಿಯಿಂದಲೇ ಮನುಷ್ಯನಿಗೆ ರೋಗಗಳು ಹರಡುತ್ತವೆ. ಆದರಿಂದ ಜನರು ಬಾಯಿಯ ಸ್ವಚ್ಛತೆ ಕುರಿತು ಹೆಚ್ಚಿನ ಗಮನ ವಹಿಸಬೇಕಾಗಿದೆ. ದಂತ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಆಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಅದರ ಸದುಪಯೋಗ ಜನರು ಪಡೆಯಬೇಕಾದೆ ಎಂದು ಕರೆ ನೀಡಿದರು.
ಜಿಮ್ಸ್ ಆಸ್ಪತ್ರೆಯ ದಂತ ವಿಭಾಗದ ಮುಖ್ಯಸ್ಥ ಡಾ.ಆರ್.ಎಸ್ ಗುಗ್ಗವಾಡ ಅವರು, ದಂತ ಚಿಕಿತ್ಸೆ ಬಗ್ಗೆ ಈಗ ಜನರಲ್ಲಿ ಜಾಗೃತಿ ಮೂಡುತ್ತಿದೆ. ಬಾಯಿ ಸುರಕ್ಷಿತೆಯಿಂದ ಮನುಷ್ಯ ಆರೋಗ್ಯವಂತನಾಗಿರಲು ಸಾಧ್ಯವಾಗುತ್ತದೆ. ಹೀಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ದಂತ ಚಿಕಿತ್ಸೆ ವಿಭಾಗದಲ್ಲಿ ಗುಣಮಟ್ಟ ಉಪಕರಣಗಳಿದ್ದು, ಅತ್ಯುತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಆದರಿಂದ ಜಿಲ್ಲೆಯ ಜನರು ಬಾಯಿಗೆ ಸಂಬಧಿಸಿದ ಯಾವುದೇ ಖಾಯಿಲೆ ಇರಲಿ, ಜಿಮ್ಸ್ ಆಸ್ಪತ್ರೆಗೆ ಬಂದು ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.
ಜಿಮ್ಸ್ ಆಸ್ಪತ್ರೆ ನಿರ್ದೇಶಕ ಡಾ. ಉಮೇಶ್ ಎಸ್.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಡಾ. ಓಂಪ್ರಕಾಶ್ ಅಂಬುರೆ, ಡಾ.ಸಂಧ್ಯಾ ಡಾಂಗೆ, ಡಾ. ನಾಗರಾಜ ಪಾಟೀಲ್, ಡಾ. ಅರವಿಂದ ಮೊಲ್ದಿ, ಡಾ. ಅರ್ಚನಾ, ಡಾ. ವೀರಭದ್ರ ಕಲ್ಯಾಣಿ, ಡಾ. ರಾಜು ರಾಂಪುರೆ, ಡಾ. ಶ್ವೇತಾ ದೇವದುರ್ಗ, ಡಾ. ಮೋಹನ ಬೀದಿಮನಿ ಇದ್ದರು. ಡಾ.ಅಶೋಕ್ ಸತ್ಯನಾರಾಯಣ ಸ್ವಾಗತಿಸಿದರು. ಮೂರನೇ ವರ್ಷದ ವಿದ್ಯಾರ್ಥಿ ನಿತೀನ್ ಪ್ರಾಥಿಸಿದರು. ಡಾ. ಸಂಗಮ್ಮ ತಿಪ್ಪಶೆಟ್ಟಿ ನಿರೂಪಿಸಿದರು.
ಬಾಯಿ ಚಿಕಿತ್ಸೆಗಾಗಿ ತಾಲೂಕು ಆಸ್ಪತ್ರೆಗಳಲ್ಲಿ 50 ಸಾವಿರ ಅನುದಾನ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ 30 ಸಾವಿರ ಅನುದಾನ ನೀಡಲಾಗುತ್ತಿದೆ. ಜತೆಗೆ ದಂತ ಚಿಕಿತ್ಸಾ ಸಿಬ್ಬಂದಿಯ ನೇಮಕ ಮಾಡಿ ಗುಣಮಟ್ಟದ ಚಿಕಿತ್ಸೆ ನೀಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಡಾ. ರತಿಕಾಂತ್ ಸ್ವಾಮಿ, ಡಿಹೆಚ್ಓ