ಮಕ್ಕಳು ದೇಶದ ಅಮೂಲ್ಯ ಸಂಪತ್ತು :  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ
ಬಾಳೆಹೊನ್ನೂರು.ಮಾ.೨೧; ಮಕ್ಕಳ ಮನಸ್ಸು ಪರಿಶುದ್ಧವಾದುದು ಮತ್ತು ಪವಿತ್ರವಾದುದು. ಬೆಳೆಯುವ ಮಕ್ಕಳಿಗೆ ಯೋಗ್ಯ ಸಂಸ್ಕಾರ ಮತ್ತು ಉತ್ತಮ ಮಾರ್ಗದರ್ಶನ ಕೊಟ್ಟರೆ ಆದರ್ಶ ವ್ಯಕ್ತಿಗಳಾಗಿ ಬಾಳಲು ಸಾಧ್ಯ. ಮಕ್ಕಳು ದೇಶದ ಅಮೂಲ್ಯ ಸಂಪತ್ತು ಎಂದುಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಎನ್.ಆರ್.ಪುರ ತಾಲೂಕ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಜನ್ಮ ಕೊಟ್ಟ ತಂದೆ ತಾಯಿಗಳು ಮಕ್ಕಳಿಗಾಗಿ ಆಸ್ತಿ ಮಾಡುವುದರ ಬದಲಾಗಿ ಹುಟ್ಟಿದ ಮಕ್ಕಳಿಗೆ ಯೋಗ್ಯ ಶಿಕ್ಷಣ ಸಂಸ್ಕಾರ ಕೊಡುವುದರ ಮೂಲಕ ಬೆಳೆಸಬೇಕು. ಐದು ವರುಷದ ವರೆಗೆ ಮಕ್ಕಳನ್ನು ಹೂವಿನಂತೆ ಜೋಪಾನ ಮಾಡಬೇಕು. ಹತ್ತು ತುಂಬುವ ಸಂದರ್ಭದಲ್ಲಿ ಮಕ್ಕಳು ತಪ್ಪು ಮಾಡಿದರೆ ಒಂದು ಪೆಟ್ಟು ಕೊಟ್ಟು ತಿದ್ದುವ ಕೆಲಸ ಮಾಡಬೇಕು. ಹದಿನಾರು ಮೀರಿದ ಸಂದರ್ಭದಲ್ಲಿ ಮಕ್ಕಳನ್ನು ಸಹೋದರರಂತೆ ಕಂಡು ಪ್ರೋತ್ಸಾಹಿಸಬೇಕು. ಯಾವ ಯಾವ ಮಕ್ಕಳಲ್ಲಿ ಎಂಥ ಅದ್ಭುತ ಶಕ್ತಿಯಿದೆಯೋ ಅದನ್ನು ಗುರುತಿಸಿ ಸ್ಫೂರ್ತಿ ತುಂಬುವ ಕಾರ್ಯ ಮಾಡಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತೊಂದಿದೆ. ಕಿರಿ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರ ಜೀವನ ಕೊನೆ ವರೆಗೆ ಇರುತ್ತವೆ. ಅವರ ಉಜ್ವಲ ಭವಿಷ್ಯಕ್ಕೆ ಕಾರಣವಾಗುತ್ತವೆ. ಉತ್ತಮ ಶಿಕ್ಷಣದೊಂದಿಗೆ ಮಕ್ಕಳು ದೇಶದ ಭಾವೀ ಪ್ರಜೆಗಳಾಗಿ ಬಾಳಲಿ. ಶ್ರೀ ಪೀಠದ ಜಾತ್ರಾ ಮಹೋತ್ಸವದ ಸುಸಂದರ್ಭದಲ್ಲಿ ನರಸಿಂಹರಾಜಪುರ ತಾಲ್ಲೂಕ ಪ್ರಥಮ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ತಮಗೆ ಅತೀವ ಸಂತೋಷವನ್ನು ಉಂಟು ಮಾಡಿದೆ. ಶ್ರೀ ಜಗದ್ಗುರು ರಂಭಾಪುರಿ ಪೀಠ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಇಂದಿನ ಮಕ್ಕಳ ಸಮ್ಮೇಳನದ ಅಧ್ಯಕ್ಷೆ ಕು.ಬಿ.ಎ.ವರ್ಷಿಣಿ, ಸಹ ಅಧ್ಯಕ್ಷ ಕು, ಮನೋಜ್ ಎಫ್.ಎ., ಕು.ರಕ್ಷಿತ ಹಾಗೂ ಕಲಾ ಇವರಲ್ಲಿರುವ ಪ್ರತಿಭೆಯನ್ನು ಕಂಡು ಶ್ರೀ ಜಗದ್ಗುರುಗಳು ಸಂತೋಷವಾಗಿದೆ. ಈ ನಾಲ್ಕೂ ಮಕ್ಕಳಿಗೆ ಈ ವರ್ಷದ ಅಬ್ಬಿಗೇರಿ ದಸರಾ ಮಹೋತ್ಸವದಲ್ಲಿ ಖಂಡಿತವಾಗಿ ಮಾತನಾಡಲು ಅವಕಾಶ ಕಲ್ಪಿಸಿಕೊಡಲಾಗುವುದು. ಅಲ್ಲದೇ ಈ ನಾಲ್ಕೂ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶ್ರೀ ಪೀಠದಿಂದ ಆರ್ಥಿಕ ಸಹಾಯವನ್ನು ಕಲ್ಪಿಸಿಕೊಡುತ್ತೇವೆ ಎಂದರು.