ಪಕ್ಷಿ ಸಂಕುಲ ಸಂರಕ್ಷಣೆ ಎಲ್ಲರ ಜವಾಬ್ದಾರಿ
ಕಲಬುರಗಿ:ಮಾ.20:ಗುಬ್ಬಚ್ಚಿಗಳು ಸೇರಿದಂತೆ ಅನೇಕ ಪಕ್ಷಿಗಳು ನೀರು, ಆಹಾರದ ಕೊರತೆ, ಅನಾನುಕೂಲಕರ ವಾತಾವರಣದಿಂದ ಇಂದು ಕಾಣೆಯಾಗುತ್ತಿವೆ. ವಿಶೇಷವಾಗಿ ಬಿಸಿಲಿನ ಪ್ರಖರತೆಯಲ್ಲಿ ಮನೆ ಅಂಗಳ, ಮೇಲ್ಭಾವಣಿಯಲ್ಲಿ ನೀರು, ಕಾಳುಗಳನ್ನಿಟ್ಟರೆ, ಪಕ್ಷಿಗಳಿಗೆ ತುಂಬಾ ಅನಕೂಲವಾಗುತ್ತದೆ. ಪಕ್ಷಿ ಸಂಕುಲಗಳ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ ಹಾಗೂ ಪಕ್ಷಿಪ್ರೇಮಿ ಶಂಕ್ರೆಪ್ಪ ಹೊಸದೊಡ್ಡಿ ಹೇಳಿದರು.
ನಗರದ ಹೈಕೋರ್ಟ್ ರಿಂಗ್ ರಸ್ತೆಯ ನವಲದಿ ಬಡಾವಣೆಯಲ್ಲಿನ ‘ಪುತಳಾಬಾಯಿ ನಿಲಯ’ದ ಪ್ರಾಂಗಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಗುಬ್ಬಚ್ಚಿ ದಿನಾಚರಣೆ’ ಪ್ರಯುಕ್ತ ಮಣ್ಣಿನ ಮುಚ್ಚಳಿಕೆಗಳ ವಿತರಣೆ ಹಾಗೂ ಅವುಗಳಲ್ಲಿ ನೀರು, ಕಾಳುಗಳನ್ನು ಇಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪನ್ಯಾಸಕ ಹಾಗೂ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಪ್ರತಿಯೊಬ್ಬರಲ್ಲಿ ಜೀವಪರ ಕಾಳಜಿ ಅಗತ್ಯವಾಗಿದೆ. ಪ್ರಾಣಿ-ಪಕ್ಷಿಗಳ ಅಸ್ಥಿತ್ವದ ಮಹತ್ವ ಅರಿತು, ಅವುಗಳ ರಕ್ಷಣೆಗೆ ಮುಂದಾಗಬೇಕಾಗಿದೆ. ಪಕ್ಷಿಗಳು ವಿವಿಧ ಪ್ರಕಾರದ ಕೀಟ, ಹುಳ-ಹುಪ್ಪಟಿಗಳನ್ನು ಭಕ್ಷಿಸುವ ಮೂಲಕ ಮಣ್ಣು ಮತ್ತು ಬೆಳೆಗಳನ್ನು ರಕ್ಷಿಸುತ್ತವೆ. ಇದರಿಂದ ಮಣ್ಣು ಸತ್ವಯುತವಾಗಿ, ಪರಾಗಸ್ಪರ್ಷ ಕ್ರಿಯೆ ಜರುಗುವುದರಿಂದ ಉತ್ತಮ ಇಳುವರಿ ಸಾಧ್ಯ. ಜೊತೆಗೆ ಗಿಡ-ಮರಗಳು ಸಮೃದ್ಧವಾಗಿ ಬೆಳೆಯುವ ಮೂಲಕ ಪರಿಸರ ಸಮತೋಲ ಕಾಪಾಡಲು ಪಕ್ಷಿಗಳು ಪರೋಕ್ಷವಾಗಿ ಕಾರಣವಾಗಿವೆ. ನಮ್ಮ ಬಳಗದ ವತಿಯಿಂದ ಪ್ರತಿವರ್ಷ ಬೇಸಿಗೆ ದಿನಗಳಲ್ಲಿ ಮಣ್ಣಿನ ಮುಚ್ಚಳಿಕೆ ವಿತರಣೆ ಮಾಡಲಾಗುತ್ತಿದೆ ಎಂದರು.
ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಪ್ರಮುಖರಾದ ಸುಷ್ಮಾ ಎಸ್.ಹೊಸದೊಡ್ಡಿ, ಸಿಂಚನಾ, ಆರೂಷಿ, ಶಿವಪ್ಪ, ನಿರಂಜನ ಸೇರಿದಂತೆ ಮತ್ತಿತರರಿದ್ದರು.