ಸಂತೋಷ, ನೆಮ್ಮದಿಯುತ ಬದುಕು ನಮ್ಮದಾಗಲಿ
ಕಲಬುರಗಿ:ಮಾ.20: ಪ್ರಸ್ತುತದ ಒತ್ತಡದ ಬದುಕಿನಲ್ಲಿ ಮನುಷ್ಯನಿಗೆ ಶಾಂತಿ,ನೆಮ್ಮದಿ, ಸಂತೋಷ ಇಲ್ಲದಂತಾಗಿದೆ. ಇರುವುದರಲ್ಲಿಯೇ ತೃಪ್ತಿಪಡುವುದು ಸ್ವಭಾವ, ದ್ವೇಷ, ಅಸೂಯೆ, ಸ್ವಾರ್ಥತೆಯಂತಹ ದುರ್ಗುಣಗಳನ್ನು ತ್ಯಜಿಸಿ, ಸತ್ಯ ಶುದ್ದವಾದ ಕಾಯಕ ಮಾಡುವ ಪ್ರವೃತ್ತಿ, ಜೀವನದ ವಾಸ್ತವಿಕತೆಯನ್ನು ತಿಳಿದುಕೊಳ್ಳುವುದು, ಸಮಾಜ ಸೇವಾ ಗುಣಗಳ ಅಳವಡಿಕೆಯಂತಹ ಮುಂತಾದ ಗುಣಗಳು ನಮ್ಮಲ್ಲಿ ಅಳವಡಿಸಿಕೊಂಡರೆ ಯಾವಾಗಲು ಸಂತೋಷ, ನೆಮ್ಮದಿಯುತ ಬದುಕು ನಮ್ಮದಾಗುತ್ತದೆ. ಅಂತಹ ಬದುಕು ನಮ್ಮೆಲ್ಲರದಗಲಿ ಎಂದು ಉಪನ್ಯಾಸಕ ಹಾಗೂ ಚಿಂತಕ ಎಚ್.ಬಿ.ಪಾಟೀಲ ಆಶಯವ್ಯಕ್ತಪಡಿಸಿದರು.
ನಗರದ ಮಹಾದೇವ ನಗರದಲ್ಲಿರುವ ‘ಶಿವಾ ಮಂದಿರ ಪೌಢಶಾಲೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಸಂತೋಷ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಪ್ರತಿಯೊಬ್ಬರಿಗೂ ಕೂಡಾ ತಮ್ಮದೇ ಆದ ಅಸ್ತಿತ್ವವಿದ್ದು, ಮತ್ತೊಬ್ಬರೊಂದಿಗೆ ಹೋಲಿಕೆ ಸಲ್ಲದು. ಉತ್ತಮ ಹವ್ಯಾಸಗಳಿರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಹಾಯ, ತಾಳ್ಮೆ, ಸಮಾಜ ಸೇವಾ ಮನೋಭಾವನೆ, ವ್ಯಾಯಾಮ, ಯೋಗ, ಧ್ಯಾನ, ಸತ್ಸಂಗ, ನಗುವಿಕೆ, ವೈಚಾರಿಕ ಮನೋಭಾವನೆ, ಧನಾತ್ಮಕ ಚಿಂತನೆ, ಸಮಯದ ನಿರ್ವಹಣೆ, ಅಧ್ಯಯನಶೀಲತೆ, ಮಾನವೀಯ ಮೌಲ್ಯಗಳು, ದೃಢ ನಿರ್ಧಾರ ಇವುಗಳ ಸಂತೋಷದ ಗುಟ್ಟುಗಳಾಗಿವೆ ಎಂದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಸಿ.ಗಾರಂಪಳ್ಳಿ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಮುಖ್ಯ ಶಿಕ್ಷಕಿ ಸಂಗೀತಾ ಸಾಲಿ, ಶಿಕ್ಷಕರಾದ ಪೂರ್ಣಿಮಾ, ಶಿಲ್ಪಾ, ವರ್ಷಾರಾಣಿ, ಪ್ರೀತಿ, ಖಮರುನ್ನೀಸಾ ಸೇರಿದಂತೆ ಇನ್ನಿತರರಿದ್ದರು.