ಗಬ್ಬು ವಾಸನೆಗೆ ಜನ ಹೈರಾಣು ; ಸಮಸ್ಯೆಗೆ ಸ್ಪಂದನೆಯೇ ಇಲ್ಲ..!
ಉಡುಪಿ-ನಗರಸಭೆ ವ್ಯಾಪ್ತಿಯ ೮ ನೇ ನಿಟ್ಟೂರು ವಾರ್ಡಿನಲ್ಲಿ ಬರುವ, ದುಗ್ಗಣಬೆಟ್ಟು ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಅಲ್ಲದೇ, ಡ್ರೈನೆಜ್ ಚೆಂಬರಿನಿಂದ ಕೊಳಚೆ ನೀರು ಹೊರಬಂದು, ರಸ್ತೆಯ ಉದ್ದಕ್ಕೂ ಹರಿಯುತ್ತಿದೆ. ನಾಗರಿಕ ಸಮಾಜ ಬದುಕು ಸಾಗಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರು ಪರಿಸರದಲ್ಲಿ ಹರಡಿರುವ ಗಬ್ಬು ವಾಸನೆಯಿಂದ ರಕ್ಷಿಸಿಕೊಳ್ಳಲು, ಮೂಗು ಮುಚ್ಚಿಕೊಂಡು, ಮಾಸ್ಕ್ ಧರಿಸಿಕೊಂಡು ತಿರುಗಾಡಬೇಕಾದ ಅಯ್ಯೋಮಯ ಪರಿಸ್ಥಿತಿ ಎದುರಾಗಿದೆ. ಪರಿಸರವು ಮಾರಕ ಸೊಳ್ಳೆಗಳ ಉತ್ಪತ್ತಿಸುವ ಕಾರ್ಖಾನೆಯಂತಾಗಿದೆ. ಜನರಿಗೆ ಡೆಂಗ್ಯೊ, ಮಲೇರಿಯಾ ಜ್ವರಬಾಧೆಗಳ ಭೀತಿ ಎದುರಾಗಿದೆ. ಪರಿಸರದಲ್ಲಿ ಹರಡಿರುವ ವಾಕರಿಕೆ ತರಿಸುವ ಅಸಹ್ಯ ವಾಸನೆಯಿಂದಾಗಿ, ಆಹಾರವನ್ನೂ ಸೇವಿಸಲಾಗದ ಸ್ಥಿತಿಯಲ್ಲಿ ಸ್ಥಳೀಯರಿದ್ದಾರೆ.
ಸಾರ್ವಜನಿಕರು ಸಮಸ್ಯೆಯನ್ನು ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿ ವರ್ಗದವರಲ್ಲಿ ಹೇಳಿಕೊಂಡರೂ ಸ್ಪಂದಿಸದೆ ಮೌನರಾಗಿದ್ದಾರೆ. ಪರಿಸರದಲ್ಲಿ ಆರಾಧನ ಕೇಂದ್ರವಾಗಿರುವ ಕಾರ್ಣಿಕದ ನಾಗಬನವಿದೆ. ನಾಗಬೀದಿ ನಾಗಬನಗಳೆಂದರೆ ಸ್ವಚ್ಚತೆಯಂದಿರುವ ಪವಿತ್ರ ಸನ್ನಿಧಾನಗಳಾಗಿವೆ. ಇಲ್ಲಿ ಉದ್ಭವಿಸಿರುವ ಪರಿಸರ ಮಾಲಿನ್ಯದಿಂದಾಗಿ ಧಾರ್ಮಿಕ ಪಾವಿತ್ರ್ಯತೆಗೂ ಧಕ್ಕೆ ಬಂದಾಂತಾಗಿದೆ.
ಸಾರ್ವಜನಿಕರ ಅಳಲಿಗೆ ಆಡಳಿತ ವ್ಯವಸ್ಥೆಗಳಿಂದ ಪರಿಹಾರ ದೊರೆಯದೆ ಅಸಹಾಯಕರಾದ ಸ್ಥಳೀಯರು, ಸಾಮಾಜಿಕ ಹೋರಾಟಗಾರ ನಿತ್ಯಾನಂದ ಒಳಕಾಡುವರಲ್ಲಿ ನೆರವಿಗೆ ಬರುವಂತೆ ವಿನಂತಿಸಿಕೊಂಡಿದ್ದಾರೆ. ಒಳಕಾಡು ಅವರು ತಕ್ಷಣದಲ್ಲಿ ನಿಟ್ಟೂರಿನ ದುಗ್ಗಣಬೆಟ್ಟು ಪರಿಸರದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದ್ದಾರೆ. ತಡವರಿಸಿದರೆ ಸಾರ್ವಜನಿಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯುವ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.