ಜನತೆಯ ಸಂಕಷ್ಟಕ್ಕೆ ಪರಿಹಾರ- ನಿಯಮಗಳಿಗೆ ರಿಯಾಯತಿ ೯/೧೧ ಆದೇಶ ಇನ್ನು ಮುಂದೆ ತಾಲೂಕಿನಲ್ಲಿ ಸಿಗಲಿದೆ..
ಪುತ್ತೂರು; ಅಭಿವೃದ್ಧಿಯ ಹಿನ್ನಲೆಯಲ್ಲಿ ೯/೧೧ ಆದೇಶ ಪಡೆಯಲು ಜನತೆಗೆ ಎದುರಾಗಿದ್ದ ತೊಡಕನ್ನು ನಿವಾರಿಸುವ ನಿಟ್ಟನಲ್ಲಿ ಎರಡು ಪ್ರಮುಖ ನಿಮಯಗಳಿಗೆ ರಿಯಾಯತಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ೨೫ ಸೆಂಟ್ಸ್ ತನಕದ ಭೂಮಿಯ ಅಭಿವೃದ್ಧಿಗೆ ಇನ್ನು ಮುಂದೆ ಅರ್ಜಿ ಸಲ್ಲಿಸಿದ ೧೫ ದಿನಗಳೊಳಗೆ ತಾಲೂಕು ಕೇಂದ್ರಗಳಲ್ಲಿ ಆದೇಶ ದೊರೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದರು.
ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಆರ್.ವೆಂಕಟಾಚಲಪತಿ ಅವರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಬಳಿಕ ಮಾಹಿತಿ ನೀಡಿದರು.
೯/೧೧ ಆದೇಶ ನೀಡಲು ಈ ಹಿಂದೆ ಇದ್ದ ರಸ್ತೆ ಹಾಗೂ ದಾನಪತ್ರದ ಎರಡೂ ನಿಯಮಗಳಿಗೂ ರಿಯಾಯತಿ ನೀಡಲಾಗಿದೆ. ಅರ್ಜಿ ಸಲ್ಲಿಸಿದ ಭೂಮಿಗೆ ಸಂಪರ್ಕ ರಸ್ತೆ ಇದ್ದರೆ ಸಾಕು. ೨೫ ಸೆಂಟ್ಸ್ ತನಕದ ಅಭಿವೃದ್ಧಿ ಮನೆಕಟ್ಟವವರಿಗೆ ಯಾವುದೇ ಸಮಸ್ಯೆ ಇಲ್ಲದೆ ಆದೇಶಪತ್ರ ಕೈಗೆ ದೊರಕುವ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಗ್ರಾಪಂ ಗಳಲ್ಲಿ ಈ ಆದೇಶ ನೀಡಲಾಗುವ ವ್ಯವಸ್ಥೆ ಇತ್ತು. ಆದರೆ ಇದನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಹೈಕೋರ್ಟಿಗೆ ಮೊರೆ ಹೋದ ಕಾರಣ ಈ ಆದೇಶ ನೀಡುವ ಜವಾಬ್ದಾರಿಯನ್ನು ನಗರಪಾಲಿಕಾ ಪ್ರಾಧಿಕಾರ (ಮೂಡಾ) ಗಳಿಗೆ ನೀಡಲಾಯಿತು. ಇದರಿಂದ ಗ್ರಾಮೀಣ ಜನತೆ ಅತ್ಯಂತ ಸಂಕಷ್ಟ ಉಂಟಾಯಿತು. ಮೂಡಾದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಿಂದ ಹಿಡಿದು ಆದೇಶ ಸಿಗುವ ತನಕ ಹಳ್ಳಿಯ ರೈತನೊಬ್ಬ ತಿಂಗಳುಗಟ್ಟಲೆ ಅಲೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಈ ಬಗ್ಗೆ ಇಲಾಖಾಧಿಕಾರಿಗಳ ಜತೆಗೆ ಚರ್ಚೆ ಮಾಡಿದ ಪರಿಣಾಮ ಇದೀಗ ೨೫ ಸೆಂಟ್ಸ್ ತನಕ ಭೂಮಿಯಲ್ಲಿ ಅಭಿವೃದ್ಧಿ ನಡೆಸಲು ತಾಲೂಕುಮಟ್ಟದಲ್ಲಿಯೇ ಆದೇಶ ಸಿಗಲಿದೆ. ಗ್ರಾಪಂ ಮೂಲಕ ಅರ್ಜಿ ಸಲ್ಲಿಸಿದರೆ ಮುಂದಿನ ಹಂತದಲ್ಲಿ ತಾಲೂಕು ಪ್ರಾಧಿಕಾರದ ಅಧಿಕಾರಿ ಸ್ಥಳಪರಿಶೀಲನೆ ನಡೆಸಿ ೧೨ರಿಂದ ೧೫ ದಿನಗಳ ಒಳಗೆ ೯/೧೧ ಆದೇಶಪತ್ರ ನೀಡುವ ಕೆಲಸ ನಡೆಯಲಿದೆ. ಪ್ರತೀ ತಾಲೂಕಿನಲ್ಲಿ ತಾಲೂಕು ಪ್ರಾಧಿಕಾರದ ಅಧಿಕಾರಿ ವಾರದಲ್ಲಿ ೨ರಿಂದ ಮೂರುದಿನ ಹಾಜರಿದ್ದು, ಈ ಕೆಲಸ ಮಾಡಲಿದ್ದಾರೆ. ಕಡಬ ತಾಲೂಕಿನ ಮಂದಿ ಪುತ್ತೂರು ಪೂಡಾದಲ್ಲಿ ಆದೇಶ ಪಡೆಯಬೇಕಾಗುತ್ತದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಂದಿಗೂ ಪುತ್ತೂರು ಪೂಡಾದಲ್ಲಿಯೇ ಆದೇಶ ನೀಡಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಆರ್.ವೆಂಕಟಾಚಲಪತಿ ಅವರು ಮಾಹಿತಿ ನೀಡಿದರು.
ಪುತ್ತೂರು ಉಪವಿಭಾಗದ ಬೆಳ್ತಂಗಡಿ, ಸುಳ್ಯ ಹಾಗೂ ಪುತ್ತೂರು ತಾಲೂಕಿಗೆ ಸೇರಿದಂತೆ ಈ ರಿಯಾಯತಿ ನಿಯಮ ಜಾರಿಗೊಂಡಿದ್ದು, ಸರ್ಕಾರದ ಆದೇಶದಲ್ಲಿ ಕಡಬ ತಾಲೂಕು ಹೆಸರು ಸೇರಿಲ್ಲವಾದರೂ ಈ ಭಾಗಕ್ಕೂ ಅನ್ವಯವಾಗಲಿದೆ. ಬೆಳ್ತಂಗಡಿಗೆ ಮೂಡಬಿದಿರೆ ಪ್ರಾಧಿಕಾರದ ಅಧಿಕಾರಿ ಬರಲಿದ್ದಾರೆ. ಪುತ್ತೂರು ಹಾಗೂ ಸುಳ್ಯ ತಾಲೂಕಿಗೆ ಪುತ್ತೂರು ಪೂಡಾ ಕಾರ್ಯದರ್ಶಿ ಬಂದು ಆದೇಶ ನೀಡುವ ಕೆಲಸ ಮಾಡಲಿದ್ದಾರೆ. ಕಡಬ ತಾಲೂಕಿನವರು ಪುತ್ತೂರು ಪೂಡಾ ಕಚೇರಿಯನ್ನು ಅವಲಂಬಿಸಬೇಕಾಗುತ್ತದೆ. ೯/೧೧ ಮಾಡಿಸುವ ಪ್ರತಿಯೊಬ್ಬರೂ ತಮ್ಮ ಗ್ರಾಪಂ ಕಚೇರಿಗಳಲ್ಲಿ ದಾಖಲೆಗಳ ಸಹಿತ ಅರ್ಜಿ ಸಲ್ಲಿಸಬೇಕಾಗುತ್ತದೆ.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕಿ ಡಾ.ಪಂಕಜ, ಉಪನಿರ್ದೇಶಕ ಡಾ.ಹನುಮಂತರಾಯಪ್ಪ, ನಗರಸಭಾ ಆಯುಕ್ತ ಮಧು ಎಸ್ ಮನೋಹರ್, ತಾಪಂ ಕಾರ್ಯನಿರ್ವಹಣಾಧಿಕಾರಿಗಳಾದ ಪುತ್ತೂರಿನ ನವೀನ್‌ಕುಮಾರ್ ಭಂಡಾರಿ, ಬೆಳ್ತಂಗಡಿಯ ಭವಾನಿಶಂಕರ, ಸುಳ್ಯದ ರಾಜಣ್ಣ, ಬಂಟ್ವಾಳದ ಸಚಿನ್ ಕುಮಾರ್, ಪುತ್ತೂರು ಪೂಡಾ ಕಾರ್ಯದರ್ಶಿ ಅಭಿಲಾಷ್, ಪುತ್ತೂರು ನಗರಯೋಜನಾ ಪ್ರಾಧಿಕಾರದ ಸದಸ್ಯರಾದ ನಿಹಾಲ್ ರೈ, ಲ್ಯಾನ್ಸಿ ಮಸ್ಕರೇನಸ್ ಹಾಗೂ ಅನ್ವರ ಖಾಸಿಂ ಇದ್ದರು.