ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು ೩೪,೪೭೦ ಪ್ರಕರಣಗಳು ವಿಲೇವಾರಿ
ಕೋಲಾರ.ಸೆ,೧೮-ಕೋಲಾರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ ೧೪ರಂದು ರಾಷ್ಟ್ರೀಯ ಲೋಕ್ ಅದಾಲತ್ ಬೈಠಕ್‌ಗಳನ್ನು ಏರ್ಪಡಿಸಲಾಗಿತ್ತು. ಸದರಿ ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಶ್ರೀ ಜಿ.ಎ. ಮಂಜುನಾಥ್ ಅವರು ಉದ್ಘಾಟಿಸಿದರು.
ಸದರಿ ರಾಷ್ಟ್ರೀಯ ಲೋಕ್ ಅದಾಲತ್ ಬೈಠಕ್‌ಗಳಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್, ಕ್ರಿಮಿನಲ್ ಮತ್ತು ವಿಮಾ ಪರಿಹಾರ ಸಂಬಂಧಪಟ್ಟ ಪ್ರಕರಣಗಳು ಸೇರಿ ಒಟ್ಟು ೩೪೪೭೦ ಪ್ರಕರಣಗಳು ರಾಜಿ ಮೂಲಕ ಮುಕ್ತಾಯವಾಗಿರುತ್ತದೆ. ಅದರಲ್ಲಿ ನ್ಯಾಯಾಲಯದಲ್ಲಿ ಚಾಲ್ತಿಯಿರುವ ಪ್ರಕರಣಗಳು ೮೩೭೭ ಹಾಗೂ ವ್ಯಾಜ್ಯ ಪೂರ್ವ ಬ್ಯಾಂಕ್, ಟ್ರಾಫಿಕ್ ಪ್ರಕರಣಗಳು ಹಾಗೂ ಇತರೆ ಸಾರ್ವಜನಿಕ ಉಪಯುಕ್ತತಾ ಪ್ರಕರಣಗಳು ಸೇರಿ ಒಟ್ಟು ೩೪೪೭೦ ಪ್ರಕರಣಗಳು ವಿಲೇಯಾಗಿರುತ್ತದೆ. ಅವುಗಳ ಪರಿಹಾರ ಮೊತ್ತ ರೂಪಾಯಿ ೧೨೫೭೫೯೧೭೨೯-೦೦ ಪರಿಹಾರ ಮೊತ್ತ ಒಳಗೊಂಡಿರುತ್ತದೆ ಎಂದು ನ್ಯಾಯಾಧೀಶರಾದ ಶ್ರೀ ಜಿ.ಎ. ಮಂಜುನಾಥ್ ಅವರು ತಿಳಿಸಿದ್ದಾರೆ.
ಕಕ್ಷಿದಾರರು ಹಾಗೂ ವಕೀಲರು ಸೇರಿ ರಾಷ್ಟ್ರೀಯ ಲೋಕ್ ಅದಾಲತ್ ಬೈಠಕ್‌ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ರಾಜೀ ಸಂಧಾನ ಮಾಡಿಕೊಂಡಿರುತ್ತಾರೆ. ಇವುಗಳಲ್ಲಿ ರಾಜೀ ಆಗುವ ಕ್ರಮಿನಲ್ ಪ್ರಕರಣಗಳು ೨೪, ಚೆಕ್ ಬೌನ್ಸ್ ಪ್ರಕರಣಗಳು ೧೮೨, ಕೌಟುಂಬಿಕ ವ್ಯಾಜ್ಯಗಳು ೧೮, ವಿಭಾಗದ ದಾವೆಗಳು ೯೧, ಇತರೆ ಸಿವಿಲ್ ಪ್ರಕರಣಗಳು ೩೫೧ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು ೨೧ ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳು ೭೭೫೨ ಸೇರಿ ಒಟ್ಟು ೮೩೭೭ ನ್ಯಾಯಾಲಯದಲ್ಲಿ ಚಾಲ್ತಿಯಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ೨೬೦೯೩ ಸೇರಿ, ಒಟ್ಟು ೩೪೪೭೦ ಪ್ರಕರಣಗಳು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಲೇಯಾಗಿರುತ್ತವೆ. ಈ ಎಲ್ಲಾ ಪ್ರಕರಣಗಳಲ್ಲಿ ರೂಪಾಯಿ ೧೨೫೭೫೯೧೭೨೯-೦೦ ಪರಿಹಾರ ಮೊತ್ತ ಮೇಲ್ಕಂಡ ಪ್ರಕರಣಗಳಲ್ಲಿ ಒಳಗೊಂಡಿರುತ್ತದೆ ಎಂದು ತಿಳಿಸಿರುತ್ತಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್‌ನ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಮುನೇಗೌಡ, ಕಾರ್ಯದರ್ಶಿ ಶ್ರೀ ಬೈರಾರೆಡ್ಡಿ ಹಾಗೂ ಎಲ್ಲಾ ವಕೀಲರಿಗೂ ಹಾಗೂ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ಸಿಬ್ಬಂದಿಗಳಿಗೆ ಹಾಗೂ ಪಕ್ಷಗಾರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸುನಿಲ ಎಸ್ ಹೊಸಮನಿ ರವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.