ಆದಿಮದಲ್ಲಿ ಮೂರು ದಿನ, ಮೂರು ನಾಟಕಗಳ ಕಲರವ
ಕೋಲಾರ,ಸೆ.೧೮:ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು ಹಾಗೂ ಆದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಡಾ.ಸಿದ್ಧಲಿಂಗಯ್ಯನವರ ನೆನಪಿನ ’ನೆಲಸಂಸ್ಕೃತಿ’ ನಾಟಕೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಗದ್ದುಗೆ ಗೌರವ, ನಾಟಕಗಳ ಪ್ರದರ್ಶನ ಹಾಗೂ ಸಂವಾದ ಮೂರು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ರಂಗಕರ್ಮಿ, ಪದ್ಮಶ್ರೀ ಪುರಸ್ಕೃತೆ ಬಿ.ಜಯಶ್ರೀ ಉದ್ಘಾಟಿಸಿ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಆದಿಮಕ್ಕೆ ಈ ಹಿಂದೆ ಬಂದಿದ್ದಾಗ ಒಂದು ದಿನಕ್ಕೆ ಒಂದು ರುಪಾಯಿ, ಅಡಿಗೆ ಮಾಡುವ ಮೊದಲು ಒಂದು ಹಿಡಿ ಅಕ್ಕಿ ಆದಿಮಕ್ಕಾಗಿ ಎತ್ತಿಟ್ಟು, ಇಲ್ಲಿಗೆ ಬಂದಾಗ ತನ್ನಿ ಎಂದಿದ್ದ ಕೋಟಗಾನಹಳ್ಳಿ ರಾಮಯ್ಯನವರನ್ನು ನೆನೆಸಿಕೊಂಡರು.
ಈ ಯೋಚನೆ ಚೆನ್ನಾಗಿದೆ ಎಂದವರು. ಹಾಗೆಯೇ ಮುಂದುವರೆಸಲು ಹೇಳಿದರು. ಕಲಾವಿದರನ್ನು, ಕಲಾವಿದರಾಗುವ ಮಕ್ಕಳನ್ನು ಅದು ಪೋಷಣೆ ಮಾಡುತ್ತದೆ. ಇಂತಹ ರೂಢಿಗಳನ್ನು ರೂಢಿಸಿಕೊಂಡಾಗ ನಮ್ಮ ಸಿಟ್ಟು ಸೆಡವು ಸ್ವಲ್ಪ ಕಡಿಮೆಯಾಗುತ್ತದೆ. ತಂದೆ, ತಾಯಿಯಿಂದ ಮಕ್ಕಳು ದಾನ ಮಾಡುವುದನ್ನು ಕಲಿಯುತ್ತಾರೆ. ಅವರ ಶಕ್ತಿಮೀರಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಮನೋಭಾವ ಮಕ್ಕಳಲ್ಲಿ ಬೆಳೆಯುತ್ತದೆ. ಈ ಕಾರಣಕ್ಕೇ ಆದಿಮವನ್ನು ನನ್ನ ಜೀವನ ಪಯಂತ ಮರೆಯುವುದಿಲ್ಲ ಎಂದರು
ಪ್ರಾಸ್ತಾವಿಕವಾಗಿ ಆದಿಮ ಹ.ಮಾ.ರಾಮಚಂದ್ರ ಮಾತನಾಡಿ, ಕೋಲಾರ ಆಜೀವಿಕ, ಅಚಲ, ತತ್ವ ಪದಕಾರರ ನೆಲ. ಈ ನೆಲದಲ್ಲಿ ಇತ್ತೀಚಿನ ವಿದ್ಯಮಾನಗಳು ಗಮನಿಸಿದಾಗ ಮನುಷ್ಯ ವಾಸ್ತವಗಳ ಮರೆಯುತ್ತಿದ್ದಾನೆ. ಆದಿಮ ೨೦೦೫ ರಿಂದ ನೆಲಸಂಸ್ಕೃತಿಗೆ ಸಂಬಂಧಿಸಿ ವಿವಿಧ ನಾಟಕಗಳು, ಜಾನಪದ ಕಲಾ ಪ್ರಕಾರಗಳು ಪ್ರದರ್ಶಿಸಿಕೊಂಡು ಬಂದಿದೆ.
ಜೆ.ಪಿ.ವಿಚಾರ ವೇದಿಕೆ ಸಂಚಾಲಕ ಆರ್. ದಯಾನಂದ್ ಮಾತನಾಡಿ, ಆದಿಮ ಒಡನಾಡಿಯಾಗಿ, ಸಂಘಟಕನಾಗಿ ಆರಂಭದಿಂದಲೂ ಜೊತೆಗಿದ್ದೇನೆ. ಡಾ.ಸಿದ್ಧಲಿಂಗಯ್ಯನವರ ನೆನಪಿನಲ್ಲಿ ನಾಟಕೋತ್ಸವ ಆದಿಮದಲ್ಲಿ ನಡೆಯುತ್ತಿರುವುದು ಅತ್ಯಂತ ಅರ್ಥಪೂರ್ಣ. ಸಿದ್ಧಲಿಂಗಯ್ಯನವರಿಗೆ ಹಾಗೂ ಕೋಲಾರಿಗೆ ಉತ್ತಮ ಸ್ನೇಹ, ಸಂಬಂಧವಿತ್ತು ಎಂದರು
ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಮೂರ್ತಿ ಸಿದ್ಧಲಿಂಗಯ್ಯನವರ ಹೋರಾಟಗಳು ಕಾವ್ಯ ನಾಟಕಗಳ ಕುರಿತು ಸುದೀರ್ಘವಾಗಿ ಮಾತನಾಡಿದರು.
ಕಳೆದ ಮುವ್ವತ್ತೈದು ವರ್ಷಗಳ ಹಿಂದಿನ ಪರಿಚಯ ಅವರ ಪ್ರತಿ ಹೋರಾಟಗಳಲ್ಲಿ ಪಾಲ್ಗೊಂಡವರಾಗಿ ಅವರ ಮಾರ್ಗದರ್ಶನದಿಂದಲೇ ಸಾಗಿ ನಿಂತಿದ್ದೇವೆ. ರಾಮಯ್ಯ, ಲಕ್ಷ್ಮೀಪತಿ ಕೋಲಾರ, ಪಿಚ್ಚಳ್ಳಿ ಶ್ರೀನಿವಾಸ್ ಶ್ಲಾಘಿಸಿದರು.
ಇವತ್ತು ನಾವು ಎಂತಹ ಕಾಲಘಟ್ಟದಲ್ಲಿದ್ದೇವೆ ಎನ್ನುವುದನ್ನು ಅರಿಯಬೇಕಿದೆ. ಕಲಾವಿದರಾದಂಥವರ ನಡತೆ ನಡವಳಿಕೆಗಳು ದಿನಾ ಟಿವಿಗಳಲ್ಲಿ ನೋಡುತ್ತಿದ್ದೇವೆ. ಅವರಿಗೆ ನಾಚಿಕೆ ಆಗಬೇಕು ಅವರಿಗಿರಬೇಕಾದ ಸಾಮಾಜಿಕ ಬದ್ಧತೆ, ಜವಾಬ್ಧಾರಿಗಳನ್ನು ಮರೆತು ವರ್ತಿಸುತ್ತಿರುವುದು ದುರದೃಷ್ಟಕರ. ಇತ್ತೀಚಿಗೆ ನಡೆದ ನಾಗಮಂಗಲ ಹಾಗೂ ಮಣಿಪುರದ ಘಟನೆಗಳ ಕುರಿತು ಆಳುವ ಜವಾಬ್ಧಾರಿ ಸ್ಥಾನದಲ್ಲಿರುವವರು ಒಂದನ್ನು ಎತ್ತಿ ಹಿಡಿದು, ಒಂದನ್ನು ಕಡೆಗೆಣಿಸಿ ನೋಡುವ ರೀತಿ ಸರಿಯಾದುದಲ್ಲ ಎಂದು ಟೀಕಿಸಿದರು.
ವೇದಿಕೆ ಕಾರ್ಯಕ್ರಮವನ್ನು ನಾಯಕ್ ಅಮಾಸ ನಿರ್ವಹಿಸಿದರೆ, ಗುಂಡಪ್ಪ ದೇವಿಕೇರಿ ಅತಿಥಿಗಳನ್ನು ಸ್ವಾಗತಿಸಿದರು.
ರಂಗಕರ್ಮಿ ನಾವೆಂಕಿ ಕೋಲಾರ ವಂದನಾರ್ಪಣೆ ನಡೆಸಿಕೊಟ್ಟರು. ನೀಲಕಂಠೇಗೌಡ, ಜೆ.ಜಿ.ನಾಗರಾಜ್, ಶಿಕ್ಷಕ ನಾರಾಯಣಸ್ವಾಮಿ, ಮಂಜು ಕಡತೂರು, ಕಾಳಿದಾಸ್, ಬಾಲಾಜಿ ಪ್ರಿಂಟರ್ಸ್, ರಾಜಪ್ಪ ಡಿ.ಆರ್.ವೆಂಕಟಸ್ವಾಮಿ, ಮಂಜುಳ ಕೊಂಡರಾಜನಹಳ್ಳಿ, ಶಿಕ್ಷಕರು, ಕಲಾವಿದರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.