ಡಿಜಿಟಲ್ ಸಖಿ ಯೋಜನೆಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಕಲಬುರಗಿ:ಮಾ.20: ಎಲ್ ಆಂಡ್ ಟಿ ಫೈನಾನ್ಸ್ ಹಣಕಾಸಿನ ನೆರವಿನೊಂದಿಗೆ ಎಕ್ಸೆಸ್ ಲೈವ್ಲೀಹೂಡ್ಸ್ ಸಂಸ್ಥೆ ಅನುಷ್ಠಾನಗೊಳಿಸುತ್ತಿರುವ ಡಿಜಿಟಲ್ ಸಖಿ ಯೋಜನೆ ಇಂದ ನಗರದ ಕನ್ನಡ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಎಸ್.ಬಿ.ಐ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಸದಾಶಿವ್ ರಾತ್ರೀಕರ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಹಿಳಾ ಶೋಷಣೆ ಹಾಗು ದೌರ್ಜನ್ಯದ ವಿರುದ್ಧ ಅಸಂಖ್ಯಾತ ಮಹಿಳೆಯರು ಬೀದಿಗಿಳಿದು ಗಟ್ಟಿಯಾಗಿ ದ್ವನಿ ಎತ್ತಿ ಆಳುವ ವ್ಯವಸ್ಥೆಯ ವಿರುದ್ಧ ಸಮರ ಸಾರಿ ವಿಜಯಿಯಾದ ದಿನವನ್ನು ನಾವು ಮಹಿಳಾ ದಿನವನ್ನಾಗಿ ಆಚರಣೆ ಮಾಡುತ್ತೇವೆ. ಸೌಟು ಹಿಡಿಯುವ ಕೈಗಳು ಜಗತ್ತನ್ನು ಆಳುವಷ್ಟು ಪ್ರಬಲವಾಗಿ ಬೆಳೆದಿವೆ. ಇದಕ್ಕೆ ಮಹಿಳೆಯರ ಪರಿಶ್ರಮ ಹಾಗು ಹೋರಾಟದ ಪ್ರತಿಫಲವೇ ಕಾರಣವಾಗಿದೆ.
ಮಹಿಳೆಯರು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಬೇಕು, ಮತ್ತು ಕುಟುಂಬದ ಪ್ರತಿ ವ್ಯಕ್ತಿ ತನ್ನ ಮನೆಯ ಮಹಿಳೆಯ ಏಳಿಗೆಗೆ ಬೆನ್ನೆಲುಬಾಗಿ ನಿಲ್ಲಬೇಕು. ಜೊತೆಗೆ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರು ತಮ್ಮ ಸಂವಿಧಾನದ ಮೂಲಕ ಕೊಟ್ಟ ವಿಶೇಷ ಮಹಿಳಾ ಹಕ್ಕುಗಳನ್ನು ನಾವು ಸಮರ್ಥವಾಗಿ ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ನಾವು ಒಂದು ಸುಂದರ ಸ್ವಾಸ್ಥ ಸಮಾಜವನ್ನು ಕಟ್ಟಲು ಸಾಧ್ಯ ಎಂದು ಅವರು ತಿಳಿಸಿದರು.
ನಂತರ ಕಲಬುರಗಿ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೇ ಮಲ್ಲಮ್ಮ ಕಡ್ಲಾ ಮಾತನಾಡಿ ಕುಟುಂಬಗಳ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದ್ದು, ಮಹಿಳೆಯರು ತನ್ನ ಗಂಡನೊಂದಿಗೆ ಕುಟುಂಬ ನಡೆಸುವ ಜವಾಬ್ದಾರಿ ಹೊತ್ತರೆ ಆ ಕುಟುಂಬಗಳು ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಪ್ರಬಲವಾಗುವಲ್ಲಿ ಯಾವುದೇ ಸಂಶಯವಿಲ್ಲ ಆ ನಿಟ್ಟಿನಲ್ಲಿ ಎಲ್ ಆಂಡ್ ಟಿ ಫೈನಾನ್ಸ್ ಹಾಗು ಎಕ್ಸೆಸ್ ಲೈವ್ಲೀಹುಡ್ಸ್ ಸಂಸ್ಥೆಯ ಜೊತೆಗೂಡಿ ಗ್ರಾಮೀಣ ಬಾಗದಲ್ಲಿ ಅನುಷ್ಟಾನಗೊಳಿಸುತ್ತಿರುವ ಡಿಜಿಟಲ್ ಸಖಿ ಯೋಜನೆ ಕುಟುಂಬದ ಸದಸ್ಯರಿಗೆ ವಿಶೇಷóವಾಗಿ ಮಹಿಳೆಯರಿಗೆ ತಾಂತ್ರಿಕ, ಆರ್ಥಿಕ ಶಿಕ್ಷಣ ಕುರಿತು ಜಾಗೃತಿ, ಜ್ಞಾನ ಹಾಗು ನಿರಂತರ ಅಭ್ಯಾಸ ಕೊಟ್ಟು ಕುಟುಂಬಗಳ ಅಭಿವೃದ್ಧಿಗೆ ಸಹಕರಿಸುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಟೇಷನ್ ಬಜಾರ್ ಪೋಲೀಸ್ ಠಾಣೆ ಮಹಿಳಾ ಪೇದೆ ಶಿವಕಾಂತ ಎಂ. ಕವಿತಾ ನಾಯ್ಡು, ಲೀಡ್ ಬ್ಯಾಂಕ್ ಆರ್ಥಿಕ ಸಲಹೆಗಾರ ಗೋಪಾಲ ಕುಲಕರ್ಣಿ, ಡಿಜಿಟಲ್ ಸಖಿ ಯೋಜನೆಯ ಗುರು ಪಿ.ಹೆಚ್ ರೇಣುಕಮ್ಮ ಕಟ್ಟಿಮನಿ, ಅಶೋಕ್ ಗುಲಗುಂಜಿ ಹಾಗು ಡಿಜಿಟಲ್ ಸಖಿಗಳು, ನೂರಾರು ಮಹಿಳಾ ಉದ್ದಿಮೆದಾರರು ಉಪಸ್ಥಿತರಿದ್ದರು, ವಿಜಯಲಕ್ಷ್ಮೀ ಎಂ. ನಿರೂಪಿಸಿದರು, ರವಿಕುಮಾರ ಸ್ವಾಗತಿಸಿದರು.