ಧರಣಿ ನಿರತ ಸ್ಥಳಕ್ಕೆ ಸಿಂದಗಿ ಮಾಜಿ ಶಾಸಕ ಭೂಸನೂರ ಭೇಟಿ
ಅಫಜಲಪುರ: ಮಾ.20:ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಯುವ ಮುಖಂಡ ಶಿವಕುಮಾರ್ ನಾಟೀಕಾರ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹಕ್ಕೆ ನೆರೆಯ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ನಾಟೀಕಾರ ಆರೋಗ್ಯ ವಿಚಾರಿಸಿದರು.
ನಂತರ ಮಾತನಾಡಿದ ಅವರು ಭೀಮಾ ನದಿ ಈ ಭಾಗದ ಜನರ ಜೀವನಾಡಿಯಾಗಿದೆ. ಇಲ್ಲಿನ ಕೃಷಿಕರು ಭೀಮಾ ನದಿಯನ್ನೇ ನಂಬಿ ಕೃಷಿಕಾಯಕ ಮಾಡಿಕೊಂಡು ಬರುತ್ತಿದ್ದಾರೆ. ಈ ಬಾರಿ ಮಳೆಗಾಲದ ಅಭಾವದಿಂದಾಗಿ ನಮ್ಮ ಭಾಗದಲ್ಲಿ ಬರಗಾಲ ಆವರಿಸಿದಂತಾಗಿದೆ. ರೈತರು ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಮಾರ್ಚ್ ತಿಂಗಳಲ್ಲೇ ನೀರಿನ ಅಭಾವ ಇಷ್ಟೊಂದು ತಲೆದೋರಿದೆ ಎಂದರೆ ಇನ್ನು ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಹಾಗೂ ಸರ್ಕಾರದ ಅಧೀನ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಈ ಕುರಿತು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಸಹ ಒತ್ತಡ ಹಾಕುತ್ತೇನೆ ಹಾಗೂ ಈ ನ್ಯಾಯ ಸಮ್ಮತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಸಹಮತ ವ್ಯಕ್ತಪಡಿಸಿದ ಅವರು ಆದಷ್ಟು ಬೇಗನೆ ತಾವು ಈ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಬೇಕು ಮತ್ತು ಸರ್ಕಾರದ ಮಟ್ಟದಲ್ಲಿ ಈ ವಿಷಯ ಚರ್ಚಿಸಿ ನೀರು ಹರಿಸುವ ಕುರಿತಾಗಿ ನಿರಂತರ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.