ಅನಧಿಕೃತ ಅಡುಗೆ ಅನಿಲ ಮಾರಾಟ ತಡೆಯಲು ಆಗ್ರಹಿಸಿ ಮನವಿ
ವಿಜಯಪುರ,ಮಾ.20:ವಿಜಯಪುರ ಭೀಮ ಸರಕಾರ ಸಂಘಟನಾ ಸಮಿತಿ ವತಿಯಿಂದ ನಗರ ಹಾಗೂ ಜಿಲ್ಲೆಯಲ್ಲಿ ಅನಧಿಕೃತವಾಗಿ ಅಡುಗೆ ಅನಿಲ ದುರ್ಬಳಕೆ ಹಾಗೂ ಮಾರಾಟ ತಡೆಯುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಭೀಮ ಸರಕಾರ ಸಂಸ್ಥಾಪಕ ಅಧ್ಯಕ್ಷ ಪರಶುರಾಮ ಚಲವಾದಿ ಮಾತನಾಡಿ, ಅನಧಿಕೃತವಾಗಿ ಅಡುಗೆ ಅನಿಲ ದುರ್ಬಳಕೆ ಹಾಗೂ ಮಾರಾಟವಾಗುತ್ತಿರುವ ಬಗ್ಗೆ ಈಗಾಗಲೇ ಹಲವಾರು ಸಂಘಟನೆಗಳು ಲಿಖಿತ ಹಾಗೂ ಮೌಖಿಕವಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಆದರೂ ಈ ಅನಧಿಕೃತ ದಂಧೆ ನಿರಾಂತಕವಾಗಿ ನಡೆಯುತ್ತಿದೆ ಎಂದು ದೂರಿದರು.
ವಿಜಯಪುರ ನಗರಕ್ಕೆ ಹಲವಾರು ಅಡುಗೆ ಅನಿಲಗಳ ಎಜನ್ಸಿಗಳಿದ್ದು, ಇವು ಅಧಿಕೃತವಾಗಿ ಸರಬರಾಜು ಸಂಖ್ಯೆಯನ್ನು ಹೊಂದಿದ್ದರೂ ಕೂಡ ಸಾವಿರಾರು ಅನಿಲ ಸಿಲಿಂಡರ್‍ಗಳು ಬ್ಲಾಕ್‍ನಲ್ಲಿ ಮಾರಾಟವಾಗಿ ಹಲವಾರು ಅನಧಿಕೃತ ಕೇಂದ್ರಗಳಲ್ಲಿ ಅಟೋಗಳಿಗೆ ಗ್ಯಾಸ್ ತುಂಬಿಸುವ ಕಾರ್ಯವು ನಡೆಯುತ್ತಿದೆ ಎಂದು ಹೇಳಿದರು.
ಕೆಲ ಬಡಾವಣೆಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟ ಸಿಲಿಂಡರ್‍ಗಳು ಸ್ಪೋಟಗೊಂಡು ಅನಾಹುತವಾಗಿದೆ. ಈ ಅನಾಹುತದಲ್ಲಿ ಹಲವಾರು ಮಕ್ಕಳು ಗಾಯಗೊಂಡಿದ್ದು, ಇದು
ಅಪಾಯಕಾರಿಯಾದಂತಹ ಘಟನೆಯಾಗಿದ್ದು ಜಿಲ್ಲಾಡಳಿತ ಈ ಅನಾಹುತಕಾರಿ ದಂಧೆಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿನಾಯಕ ಸೊಂಡೂರ, ಇರ್ಫಾನ ಬೀಳಗಿ, ಉದಯಕುಮಾರ, ಆಕಾಶ, ಬಸಪ್ಪ ಬೋರಗಿ, ಬಾಬು ರಾಠೋಡ ಮತ್ತಿತರರು ಉಪಸ್ಥಿತರಿದ್ದರು