ನೀರಿನ ಸಮಸ್ಯೆ ಬಗೆಹರಿಸಲು ಕರವೇ ಆಗ್ರಹ
ಔರಾದ್ :ಮಾ.20: ಬೆಸಿಗೆ ಆರಂಭದ ದಿನಗಳಲ್ಲಿಯೇ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನೀರಿನ ಬರದ ಸಮಸ್ಯೆ ಉಲ್ಬಣಗೊಂಡಿದೆ. ಆದರೆ ಪಟ್ಟಣ ಪಂಚಾಯಿತಿಯ ನಿರ್ಲಕ್ಷ್ಯದಿಂದ ಕಳೆದ 8 ದಿನಗಳಿಂದ ಹೆಚ್ಚು ದಿನಗಳಿಂದ ನೀರು ಪೂರೈಕೆ ವಿಫಲಗೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ)ದ ಕಾರ್ಯಕರ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಆಗಿರುವ ತಹಸೀಲ್ದಾರ ನಾಗಯ್ಯ ಹಿರೇಮಠ ಅವರಿಗೆ ದೂರು ಸಲ್ಲಿಸಿದ್ದಾರೆ. ಪಟ್ಟಣದ ಜನ ಹಗಲು-ರಾತ್ರಿ ಎನ್ನದೇ ಜನತೆ ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವ ಚಿತ್ರಣ ಹೆಚ್ಚಾಗುತ್ತಿದೆ. ಇನ್ನೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾದ ವಿದ್ಯಾರ್ಥಿಗಳು ನೀರಿಗಾಗಿ ಅಲೆದಾಡುತ್ತಿದ್ದಾರೆ ಎಂದು ದೂರಿದರು.
ಪಟ್ಟಣದಲ್ಲಿ 30-40 ಸಾವಿರ ಜನ ವಾಸವಾಗಿದ್ದು, ನೀರು ಸರಬರಾಜು ಮಾಡದ ಕಾರಣ ಅನೇಕರು ಬಾಡಿಗೆ ಮನೆಗಳು ಬಿಟ್ಟು ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಜಾನುವಾರುಗಳಿಗೆ ನೀರಿಲ್ಲದ ಕಾರಣ ರೈತರು ತಮ್ಮ ಜಾನುವಾರುಗಳಿಗೆ ಕಸಾಯಿಖಾನೆಗೆ ತಳ್ಳುವ ಪರಿಸ್ಥಿತಿ ಉದ್ಭವಿಸಿದೆ. ಆದರೆ ಪಟ್ಟಣ ಪಂಚಾಯತಿ ನೀರಿನ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ ಎಂದು ದೂರಿದರು. 2 ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಆಡಳಿತಾಧಿಕಾರಿ ನಾಗಯ್ಯ ಹಿರೇಮಠ ಅವರು ಮಾತನಾಡಿ ಎರಡು ದಿನಗಳಲ್ಲಿ ಪಟ್ಟಣದಲ್ಲಿ ನೀರು ಪೂರೈಕೆ ಮಾಡುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಅನಿಲ ದೇವಕತ್ತೆ, ರಾಜು ಮುದಾಳೆ, ಸಚಿನ ಮೇತ್ರೆ, ಸುನಿಲ್ ವಜ್ವಾ, ಆಕಾಶ ಮೇತ್ರೆ, ಶ್ರೀಕಾಂತ ಮೇತ್ರೆ, ಆಕಾಶ ದೇವಕತ್ತೆ ಸೇರಿದಂತೆ ಅನೇಕರಿದ್ದರು.