ಪ್ರತಿಭಟನಾ ಸ್ಥಳಕ್ಕೆ ಸಂಸದ ಡಾ. ಉಮೇಶ ಜಾಧವ್ ಭೇಟಿ
ಅಫಜಲಪುರ:ಮಾ.20: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ ಯುವ ಮುಖಂಡ ಶಿವಕುಮಾರ್ ನಾಟೀಕಾರ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹಕ್ಕೆ ಕಲಬುರಗಿ ಸಂಸದ ಡಾ. ಉಮೇಶ ಜಾಧವ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಬಳಿಕ ಸ್ವತಃ ಅವರೇ ವೈದ್ಯರಾಗಿರುವುದರಿಂದ ನಾಟೀಕಾರ ಆರೋಗ್ಯ ತಪಾಸಣೆ ಮಾಡಿ ಆರೋಗ್ಯದಲ್ಲಿ ಒಂದಷ್ಟು ವ್ಯತ್ಯಾಸ ಕಂಡು ಬರುತ್ತಿದ್ದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ನಿಯಮತವಾಗಿ ನಾಟೀಕಾರ ಅವರ ಆರೋಗ್ಯ ವಿಚಾರಿಸಲು ಸೂಚಿಸಿದರು.
ನಂತರ ಮಾತನಾಡಿದ ಅವರು ನಿಮ್ಮ ನ್ಯಾಯಸಮ್ಮತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಹೀಗಾಗಿ ಆದಷ್ಟು ಬೇಗನೆ ತಾವು ಈ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಮತ್ತು ಸರ್ಕಾರದ ಮಟ್ಟದಲ್ಲಿ ಈ ವಿಷಯ ಚರ್ಚಿಸಿ ನೀರು ಹರಿಸುವ ಕುರಿತಾಗಿ ನಿರಂತರ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.