ಹಿಂದೂಳಿದ ನಾಯಕ ನಿಂದ ಹಿಂದೂಳಿದ ಕಲ್ಯಾಣಕ್ಕೆ 50% ಬಜೆಟ್ ಕಟ್
ಸಂಜೆವಾಣಿ ವಾರ್ತೆ
ಹೊಸಪೇಟೆ, ಮಾ.20 : ‘ಹಿಂದುಳಿದವರ ಚಾ‍ಂಪಿಯನ್‌’ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿಯ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಇರುವ ನಿಗಮ, ಮಂಡಳಿಗಳಿಗೆ ಶೇ 50ಕ್ಕಿಂತ ಕಡಿಮೆ ಅನುದಾನ ನೀಡಿದ್ದಾರೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.
ಹೊಸಪೇಟೆಯಲ್ಲಿ ಮಾತನಾಡಿದ ಅವರು, ವಿವಿಧ ನಿಗಮ, ಮಂಡಳಿಗಳಿಗೆ 2022–23ನೇ ಸಾಲಿನಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ನೀಡಿದ ಅನುದಾನಕ್ಕೆ ಸಮನಾಗಿ 2024–25ರ ಬಜೆಟ್‌ನಲ್ಲಿ ಅನುದಾನ ನೀಡಿದ್ದರೆ ಸಹ ಯಾವುದೇ ಆಕ್ಷೇಪ ಇರಲಿಲ್ಲ, ಆದರೆ ಕೆಲವು ನಿಗಮಗಳಿಗೆ ಶೇ 50ಕ್ಕಿಂತ ಕಡಿಮೆ ಅನುದಾನ ನೀಡಲಾಗಿದೆ. ಇದು ಸಿದ್ದರಾಮಯ್ಯ ಅವರ ನಿಜ ಮುಖವನ್ನು ಪರಿಚಯಿಸಿದೆ ಎಂದರು.
ಗ್ಯಾರಂಟಿಗಳ ಸಹಿತ ಕಾಂಗ್ರೆಸ್‌ ಸರ್ಕಾರದ ಯೋಜನೆಗಳೆಲ್ಲವೂ ಮತಕ್ಕಾಗಿ ರೂಪಿಸಿದಂತಹ ಯೋಜನೆಗಳು, ಆದರೆ ಬಿಜೆಪಿಯ ಯೋಜನೆಗಳು ಬದುಕು ಕಟ್ಟಿಕೊಳ್ಳಲು ನೆರವಾಗುವಂತಹವುಗಳು ಎಂದು ಅವರು ಪ್ರತಿಪಾದಿಸಿದರು.
‘ಕಾಂಗ್ರೆಸ್‌ಗೆ ಮತ ಹಾಕದಿದ್ದರೆ ಬಿಟ್ಟಿ ಭಾಗ್ಯಗಳು ನಿಂತು ಹೋಗುತ್ತವೆ ಎಂಬ ಬೆದರಿಕೆ ಒಡ್ಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅವಮಾನ. ಸಿದ್ದರಾಮಯ್ಯ ಸರ್ಕಾರ ಕಳೆದ 10 ತಿಂಗಳಲ್ಲಿ ಹಿಂದುಳಿದ ವರ್ಗದವರಿಗಾಗಿ ಒಂದೇ ಒಂದು ಕಾರ್ಯಕ್ರಮವನ್ನೂ ಕೊಟ್ಟಿಲ್ಲ’ ಎಂದು ರಘು ಕೌಟಿಲ್ಯ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಎಲ್ಲಾ ಯೋಜನೆಗಳೂ ಸ್ವಯಂ ಉದ್ಯೋಗ, ಸ್ವಾವಲಂಬಿ ಜೀವನಕ್ಕೆ ನೆರವಾಗುವಂತದ್ದು. ಮತದಾರರು ಇದರ ಬಗ್ಗೆ ತಿಳಿದುಕೊಂಡು, ಈ ಬಾರಿಯೂ ಮೋದಿ ಅವರ ಕೈ ಬಲಪಡಿಸುವ ವಿಶ್ವಾಸ ಇದೆ ಎಂದರು.
ಪಕ್ಷದ ಪರಿಶಿಷ್ಟ ಪಂಗಡ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಬಂಗಾರಿ ಹನುಮಂತು, ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ, ಒಬಿಸಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಈಟಿ ಲಿಂಗರಾಜು, ಉಪಾಧ್ಯಕ್ಷ ಅಶೋಕ, ಹೊಸಪೇಟೆ ಮಂಡಲ ಅಧ್ಯಕ್ಷ ಶಂಕರ್ ಮೇಟಿ ಪಾಲ್ಗೊಂಡಿದ್ದರು.
ಎರಡು ಬಜೆಟ್‌ಗಳಲ್ಲಿ ನಿಗಮಗಳಿಗೆ ಹಣ ನೀಡಿಕೆ ವಿವರ
ನಿಗಮ;2022–23 ಬೊಮ್ಮಾಯಿ ಸರ್ಕಾರ;2024–25 ಸಿದ್ದರಾಮಯ್ಯ ಸರ್ಕಾರ
ದೇವರಾಜ ಅರಸು; 190 ಕೋಟಿ; 100  ಕೋಟಿ
ಮರಾಠ; 100 ಕೋಟಿ; 60 ಕೋಟಿ
ವಿಶ್ವಕರ್ಮ;25 ಕೋಟಿ; 13 ಕೋಟಿ
ಅಂಬಿಗರ ಚೌಡಯ್ಯ; 5 ಕೋಟಿ; 9 ಕೋಟಿ
ಉಪ್ಪಾರ; 15 ಕೋಟಿ; 8 ಕೋಟಿ
ವೀರಶೈವ;100 ಕೋಟಿ; 60 ಕೋಟಿ
ಸವಿತಾ; 10ಕೋಟಿ; 5 ಕೋಟಿ
ಅರೆ, ಅರೆಅಲೆಮಾರಿ; 16 ಕೋಟಿ; 12 ಕೋಟಿ