ಹಬೋಹಳ್ಳಿ :ರಾಗಿ ಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ತಹಶೀಲ್ದಾರ್
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.20 ಖಾಸಗಿ ವರ್ತಕರು ಮಾಡುವ ಮಾರುಕಟ್ಟೆ ಧರಕ್ಕಿಂತ ಸರ್ಕಾರ ತೆರೆದಿರುವ ರಾಗಿ ಮತ್ತು ಜೋಳದ ಖರೀದಿ ಕೇಂದ್ರದಲ್ಲಿ ಹೆಚ್ಚಿನ ಧರ ನಿಗದಿಪಡಿಸಿದ್ದು ತಾಲೂಕಿನ ರೈತರು ಸದುಪಯೋಗಪಡಿಸಿಕೊಳ್ಳಿ ಎಂದು ತಹಶೀಲ್ದಾರ್ ಚಂದ್ರಶೇಖರ್ ಶಂಭಣ್ಣ ಗಾಳಿ ತಿಳಿಸಿದರು.   
ಪಟ್ಟಣದ   ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ.ಆವರಣದಲ್ಲಿ ರಾಗಿ ಮತ್ತು ಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್  ಅವರು ಬರಗಾಲದಿಂದ ತತ್ತರಿಸಿರುವ ರೈತರು ತಮ್ಮ ಬೆಳೆಗಳಿಗೆ ಬೆಲೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 2023-24 ನೇ ಸಾಲಿನ ರಾಗಿ ಮತ್ತು ಜೋಳದ ಖರೀದಿ ಕೇಂದ್ರವನ್ನು ತೆರೆಯಲಾಗಿದೆ.ಪ್ರಸಕ್ತ ಸಾಲಿನಲ್ಲಿ  ಖರೀದಿ ಕೇಂದ್ರದಲ್ಲಿ 202 ರೈತರು ನೋಂದಾವಣೆ ಮಾಡಿಸಿದ್ದಾರೆ.ಅದರಲ್ಲಿ 5100 ಕ್ವಿಂಟಾಲ್ ರಾಗಿ ಮತ್ತು 54 ಕ್ವಿಂಟಾಲ್ ಬಿಳಿಜೊಳದ ಖರೀದಿಗೆ ಇಬ್ಬರು ರೈತರಿಂದ ನೋಂದಣಿ ಆಗಿದ್ದು ಎಫ್ ಎ.ಕ್ಯೂ  ಗುಣಮಟ್ಟ ಆಧಾರದ ಮೇಲೆ ಪ್ರತಿ ಕ್ವಿಂಟಾಲ್ ರಾಗಿಗೆ  3846 ರೂ.ಗಳಿಗೆ  ಹಾಗೂ ಬಿಳಿ ಜೋಳದ ಎಫ್.ಎ.ಕ್ಯೂ  ಗುಣಮಟ್ಟ ಆಧಾರದ ಮೇಲೆ  3180 ರೂ ಬೆಲೆಯನ್ನು ನಿಗಧಿಗೊಳಿಸಲಾಗಿದೆ.ಮಾರುಕಟ್ಟೆ ಬೆಲೆಗಿಂತ 600 ರೂ ಕ್ಕೂ ಹೆಚ್ಚು ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ರೈತರಿಗೆ ಸಿಗುತ್ತದೆ .ಖರೀದಿ ಕೇಂದ್ರಕ್ಕೆ ರೈತರ ಸಹಕಾರದೊಂದಿಗೆ ಹೆಚ್ಚು ಮಾರಾಟ ಮಾಡುವ ಮೂಲಕ ಬೆಂಬಲ ಬೆಲೆ ಖರೀದಿ ಕಾರ್ಯ ಯಶಸ್ವಿಯಾಗಲಿ ರೈತರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ  ವಿಜಯನಗರ ಜಿಲ್ಲೆಯ ನೋಡಲ್ ಅಧಿಕಾರಿ ಜಿಕೆ ವೆಂಕಟೇಶ್ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಮತಿ ಶೈಲಾ ಎಂ ಮಂಡಳಿಯ ಜಿಲ್ಲಾ ವ್ಯವಸ್ಥಾಪಕರಾದ ಸಂಗಮೇಶ್ ಗಾಣಿಗೇರ, ಎಪಿಎಂಸಿ ಸಿಬ್ಬಂದಿಗಳಾದ ಮಂಜುನಾಥ ವೆಂಕಟೇಶ, ಆಹಾರಧಾನ್ಯ ವರ್ತಕರ ಸಂಘದ ಅಧ್ಯಕ್ಷರಾದ ಶ್ರೀಧರ್ ಶೆಟ್ರು ಕಾರ್ಯದರ್ಶಿಗಳಾದ ಬಸವರಾಜ ಚತ್ರದಹಳ್ಳಿ, ಕೃಷಿ ಮಾರಾಟ ಮಂಡಳಿಯ ಖರೀದಿ ಅಧಿಕಾರಿ ಉದಯಕುಮಾರ್ ಅಥಣಿ ಮಠ, ವರ್ತಕರಾದ ಮಲ್ಲಣ್ಣ ಮಾಲ್ವಿ ರಾಮಣ್ಣ ವಿಜಯಕುಮಾರ್ ಇತರ ವರ್ತಕರು  ರೈತರು,ಹಮಾಲರು  ಇತರರು ಇದ್ದರು.