ಮಾರ್ಚ್ 25 ರಂದು ತಂಬ್ರಹಳ್ಳಿ ಶ್ರೀ ಬಂಡೇ ರಂಗನಾಥೇಶ್ವರ ಸ್ವಾಮಿ ರಥೋತ್ಸವ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ :ಮಾ.20  ತಾಲ್ಲೂಕಿನ ತಂಬ್ರಹಳ್ಳಿಯ ಇತಿಹಾಸ ಪ್ರಸಿದ್ದ ಶ್ರೀ ಬಂಡೇ ರಂಗನಾಥೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಬೆಟ್ಟಕ್ಕೆ ಕರೆದೊಯ್ಯುವ ಕಾರ್ಯಕ್ರಮ ಮಂಗಳವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ಗ್ರಾಮದ ವಂಶ ಪಾರಂಪರ್ಯ ಧರ್ಮಕರ್ತರಾದ  ಶ್ಯಾನುಬೋಗರ ಉದಯ ಭಾಸ್ಕರ್ ಅವರ ಮನೆಯಲ್ಲಿದ್ದ ಶ್ರೀ ರಂಗನಾಥೇಶ್ವರ ಹಾಗೂ ಲಕ್ಷ್ಮೀ ದೇವಿಯ ಉತ್ಸವ ಮೂರ್ತಿಯನ್ನು ಪೂಜಿಸಿ  ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.
ಸುಕ್ಷೇತ್ರ ನಂದಿಪುರ ಮಠದ ಡಾ. ಶ್ರೀ ಮಹೇಶ್ವರ ಸ್ವಾಮೀಜಿ ಹಾಗೂ ಗದ್ದಿಕೆರೆ ಚರಂತೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಗ್ರಾಮದ ನೂರಾರು ಮಹಿಳೆಯರು ಕಳಸ ಹಿಡಿದು ಶ್ರೀ ರಂಗನಾಥೇಶ್ವರ ಸ್ವಾಮಿಗೆ ಆರತಿ ಬೆಳಗಿದರು. ಸಮಾಳ ಹಾಗೂ ಮಂಗಳ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಈರ್ವರು ಸ್ವಾಮೀಜಿ ಗಳ ಜೊತೆ ಬೆಟ್ಟಕ್ಕೆ ಪಾದ ಯಾತ್ರೆಯ ಮೂಲಕ ತೆರಳಿದರು.
ಈ ಕುರಿತು ದೇವಸ್ಥಾನ ಕಮಿಟಿಯ ಗೌರವಾಧ್ಯಕ್ಷರಾದ ಡಾ. ಮಹೇಶ್ವರ ಸ್ವಾಮೀಜಿ ಮಾತನಾಡಿ ಈ ಭಾಗದ ಆರಾಧ್ಯ ದೈವ ಶ್ರೀ ಬಂಡೇ ರಂಗನಾಥೇಶ್ವರ ಸ್ವಾಮಿಯ ರಥೋತ್ಸವ ಪ್ರತಿ ವರ್ಷದಂತೆ ಪಾಲ್ಗುಣ ಮಾಸದ ಹೋಳಿ  ಹುಣ್ಣಿಮೆಯ ಮಾರ್ಚ್ 25 ರ ದಿನದಂದು ರಥೋತ್ಸವ ಹಾಗೂ ಮರುದಿನ 26 ರ ಬುಧವಾರದಂದು  ಬೇಟೆ ಗಿಡ ಉತ್ದವ  ಜರುಗಲಿದೆ. ಇಂದಿನಿಂದ ಸಂಪ್ರದಾಯದಂತೆ ಬೆಟ್ಟದಲ್ಲಿ ನಾನಾ ಪೂಜೆ ಕೈಂಕರ್ಯಗಳು ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ಪುರೋಹಿತರು ಮತ್ತು ಅರ್ಚಕರು ನೆರವೇರಿಸಲಿದ್ದಾರೆ. ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ತನು,ಮನ,ಧನ ಅರ್ಪಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಹೆಚ್ ಬಿ ನಾಗನಗೌಡ್ರು, ಕಡ್ಡಿ ಚನ್ನಬಸಪ್ಪ, ತಳವಾರ ವೆಂಕೋಬಪ್ಪ, ಬಿ.ಶ್ರೀನಿವಾಸ, ಸಮಿತಿಯ ಅಧ್ಯಕ್ಷ ಬಸರಕೋಡು ಲಕ್ಷ್ಮಣ,  ಸಮಿತಿಯ ಇತರ ಪದಾಧಿಕಾರಿಗಳಾದ ಹೆಚ್ ಬಿ.ಗಂಗಾಧರಗೌಡ, ಟಿ.ಉದಯ ಭಾಸ್ಕರ್, ಬಣಕಾರ ಕೊಟ್ರೇಶ್, ಸರಾಯಿ ಮಂಜುನಾಥ, ಮಂಜುನಾಥ ಪಾಟೀಲ್, ಸುಣಗಾರ ಪರಶುರಾಮ, ಸೊಬಟಿ ಹರೀಶ್, ಲೈಬ್ರರಿ ಪಾಂಡುರಂಗಪ್ಪ,  ಏಣಿಗಿ ರಾಮಣ್ಣ,  ಬಾಳೆಕಾಯಿ ವಿರೇಶ್, ಗ್ರಾಪಂ ಅಧ್ಯಕ್ಷೆ ಏಣಿಗಿ ಪೂರ್ಣಿಮಾ, ಬಸವಯೋಗ ಟ್ರಸ್ಟ್ ನ ಶೆಟ್ರು ಗೀತಾ ಹಾಗೂ ಸದಸ್ಯರು, ಆರ್ಚಕ ಯಲ್ಲಪ್ಪಗೌಡ್ ಪೂಜಾರ್, ರಂಗನಾಥ, ಮಹಾಬಲೇಶ್ವರ ಸ್ವಾಮಿ, ಕರಿಬಸವಯ್ಯ ಹಾಗೂ ಇತರರು ಇದ್ದರು.