ಜಾನುವಾರುಗಳಿಗೆ ಕಾಲುಬಾಯಿ ರೋಗದಲಸಿಕೆ ಹಾಕಿಸಿ:ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಬೀದರ. ಮಾ. 20: ಪಶು ಇಲಾಖೆಯಿಂದ ಬೀದರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮ ಏಪ್ರಿಲ್ 1 ರಿಂದ 30 ರ ವರೆಗೆ ಹಮ್ಮಿಕೊಂಡಿದ್ದು ಸಾರ್ವಜನಿಕರು ತಪ್ಪದೆ ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೇಸಿಗೆ ಇರುವುದರಿಂದ ಬೆಳಿಗ್ಗೆ ಜಾನುವಾರುಗಳಿಗೆ ಲಸಿಕೆ ಹಾಕಬೇಕು. ರೈತರು ತಪ್ಪದೇ ತಮ್ಮ ದನ ಮತ್ತು ಎಮ್ಮೆಗಳಿಗೆ ಲಸಿಕೆ ಹಾಕಿಸಿ ಸರಕಾರದಿಂದ ಉಚಿತವಾಗಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ. ಬೇಸಿಗೆ ಇರುವುದರಿಂದ ಜಾನುವಾರುಗಳ ಬಾಯಿ ಮತ್ತು ಕಾಲುಗಳಲ್ಲಿ ಹುಣ್ಣುಗಳಾಗಿ ಅವುಗಳ ಆರೋಗ್ಯ ಸಮಸ್ಯೆಗಳುಂಟಾಗುತ್ತವೆ ಹಾಗಾಗಿ ಜಾನುವಾರುಗಳ ಬಗ್ಗೆ ಸಾರ್ವಜನಿಕರು ಕಾಳಜಿವಹಿಸಬೇಕೆಂದು ಹೇಳಿದರು.
ಈ ಲಸಿಕಾ ಕಾರ್ಯಕ್ರಮದಲ್ಲಿ 242 ಜನ ಲಸಿಕೆ ಹಾಕಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ 11.30 ರವರೆಗೆ ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಲಸಿಕೆ ನೀಡಲು ತಮ್ಮ ಮನೆಗಳ ಭೇಟಿಗೆ ಬಂದಾಗ ಅವರಿಗೆ ಸಹಕಾರ ನೀಡುವದರ ಜೊತೆಗೆ ತಮ್ಮ ಎಲ್ಲಾ ಜಾನುವಾರುಗಳಿಗೆ ಮರೆಯದೆ ಲಸಿಕೆ ಹಾಕಿಸಿ ಎಂದು ಹೇಳಿದರು.
ಬೇಸಿಗೆ ಇರುವುದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಹಾಗೂ ಈ ಲಸಿಕಾ ಅಭಿಯಾನವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಸಬೇಕೆಂದು ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪ ನಿರ್ದೆಶಕರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೆಶಕರಾದ ಡಾ. ನರಸಪ್ಪ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರ ಸಭೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಪಶು ಇಲಾಖೆಯ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.