ಹರಿಹರ; ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದಲ್ಲಿ ಎಂಟು ನಿರ್ಣಯಗಳ ಮಂಡನೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಮಾ.೨೦; ಹರಿಹರದ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಎಂಟು ನಿರ್ಣಯಗಳನ್ನು ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷರಾದ ಕೆ. ರಾಘವೇಂದ್ರ ನಾಯರಿ ಮಂಡಿಸಿದರು.ಮೊದಲನೆಯದಾಗಿ, ನೆನೆಗುದಿಯಲ್ಲಿರುವ ೩ ನೇ ವಿಶ್ವ ಕನ್ನಡ ಸಮ್ಮೇಳನವನ್ನು  ಅತೀ ಶೀಘ್ರವಾಗಿ ದಾವಣಗೆರೆಯಲ್ಲಿ  ಆಯೋಜಿಸಲು ಕರ್ನಾಟಕ ರಾಜ್ಯ ಸರಕಾರ ಅಗತ್ಯ ಕ್ರಮವಹಿಸಬೇಕು ಹಾಗೂ ಈ ನಿಟ್ಟಿನಲ್ಲಿ ಶೀಘ್ರವಾಗಿ ವಿಶೇಷಾಧಿಕಾರಿಯನ್ನು ನೇಮಿಸಬೇಕೆಂದು ಸಮ್ಮೇಳನವು ಸರಕಾರವನ್ನು ಆಗ್ರಹಿಸುತ್ತದೆ ಎಂದರು.ವಿಶ್ವ ಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದಕ್ಕೆ ರಾಜ್ಯ ಸರಕಾರವನ್ನು ಅಭಿನಂದಿಸುತ್ತಾ, ಈ ಘೋಷಣೆಗೆ ಪೂರಕವಾಗಿ ಬಸವಣ್ಣನವರ ಕುರಿತಾದ ಚರ್ಚೆ ನಾಡಿನಾದ್ಯಂತ ಆಯೋಜಿಸಬೇಕು.  ನಾಮಫಲಕಗಳು ಕನಿಷ್ಠ ಶೇಕಡಾ ೬೦ ರಷ್ಟು ಕನ್ನಡ ಭಾಷೆಯಲ್ಲಿಯೇ ಇರಬೇಕು ಎನ್ನುವ ಸರಕಾರದ ಆದೇಶ ಯಥಾವತ್ತಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಇಚ್ಛಾಶಕ್ತಿಯನ್ನು ತೋರಬೇಕು ಎಂದು ನಿರ್ಣಯಿಸಲಾಯಿತು.ಎಲ್ಲಾ ವರ್ಗದ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ ಮಾಡುವುದರ ಜೊತೆಗೆ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿರುವ ವಿದ್ಯಾರ್ಥಿಗಳಿಗೆ ಎಲ್ಲಾ ಹಂತದ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಕನ್ನಡ ಭಾಷೆಯನ್ನು ಅನ್ನದ ಭಾಷೆಯನ್ನಾಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.ದಾವಣಗೆರೆ ಜಿಲ್ಲೆಯಲ್ಲಿ ಹಾಗೂ ವಿಶೇಷವಾಗಿ ಹರಿಹರ ತಾಲೂಕಿನಲ್ಲಿ ಭತ್ತ ಮತ್ತು ಗೋವಿನ ಜೋಳ ಉತ್ಪನ್ನಾಧಾರಿತ ಕೈಗಾರಿಕೆಗಳ ಸ್ಥಾಪನೆ, ಟೆಕ್ ಪಾರ್ಕ್ ಸ್ಥಾಪನೆ ಸೇರಿದಂತೆ ನೂತನ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡುವುದರೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಈ ಹಿಂದೆ ಕೆಲಸ ಕಳೆದುಕೊಂಡ ಕಾರ್ಮಿಕರ ಮತ್ತು ಅವರ ಮಕ್ಕಳ ಪುನಶ್ಚೇತನಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ನಿರ್ಣಯ ಮಂಡಿಸಲಾಯಿತು.ಹರಿಹರ ತಾಲೂಕಿನ ಭೈರನಪಾದ ಏತ ನೀರಾವರಿ ಯೋಜನೆಯನ್ನು ಜಾರಿಗೊಳಿಸುವುದರ ಮೂಲಕ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗಗಳಿಗೂ ನೀರು ತಲುಪಿಸಬೇಕು ಹಾಗೂ ಹರಿಹರ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಬೇಕು. ಶಿಥಿಲಾವಸ್ಥೆಯಲ್ಲಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರಿನ  ಬಾಪೂಜಿ ಹಾಲ್ ನ್ನು ನವೀಕರಣಗೊಳಿಸುವುದರ ಜೊತೆಗೆ ಮಧ್ಯ ಕರ್ನಾಟಕ ಭಾಗದಲ್ಲಿ ವಿಶ್ವ ದರ್ಜೆ ಸ್ಥಾನಮಾನದ ಕ್ರೀಡಾಂಗಣವನ್ನು ಸ್ಥಾಪಿಸಬೇಕು. ಹಾಗೂ ಹರಿಹರ ಸೇರಿದಂತೆ ದಾವಣಗೆರೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಅಗತ್ಯ ಸಹಕಾರ ಮತ್ತು ಅನುದಾನ ನೀಡಬೇಕು ಎಂಬ ನಿರ್ಣಯಗಳನ್ನು ಬಹಿರಂಗ ಅಧಿವೇಶನದಲ್ಲಿ ಮಂಡಿಸಲಾಯಿತು.ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. ಬಿ. ದಿಳ್ಯಪ್ಪ, ರೇವಣಸಿದ್ದಪ್ಪ ಅಂಗಡಿ, ಸಿ.ಜಿ. ಜಗದೀಶ್ ಕೂಲಂಬಿ, ಸುಮತಿ ಜಯಪ್ಪ, ಜಿಗಳಿ ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.