ಸುತ್ತೂರು ಶ್ರೀಗಳ ಆಶೀರ್ವಾದ ಪಡೆದ ಯಧುವೀರ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.20:- ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಬಳಿಕ ಸಿಎಂ ಸಿದ್ದರಾಮಯ್ಯ ಯಾರು ರಾಜ..? ಎಂಬ ಹೇಳಿಕೆ ಕುರಿತ ಪ್ರಶ್ನೆಗೆ, ಹೌದು, ಸಿಎಂ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ಆ ವಿಚಾರದ ಬಗ್ಗೆ ನಾನು ಹೇಗೆ ಪ್ರತಿಕ್ರಿಯೆ ಕೊಡಲಿ ಎಂದರು. ಅಲ್ಲದೆ, ನಾನು ಈಗಾಗಲೇ ಹೇಳಿದ್ದೇನೆ. ಸಂವಿಧಾನದಲ್ಲಿ ರಾಜ ರಾಣಿ ಎಂಬ ಯಾವುದು ವಿಶೇಷ ಮಹತ್ವ ಇಲ್ಲ. ಎಲ್ಲರೂ ಪ್ರಜೆಗಳೇ ಇಷ್ಟನ್ನು ಮಾತ್ರ ನಾನು ಹೇಳಬಲ್ಲೇ ಎಂದರು.
ಸುತ್ತೂರು ಸ್ವಾಮೀಜಿಗಳನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಬೇರೆ ಯಾವ ವಿಚಾರಗಳ ಬಗ್ಗೆ ಚರ್ಚೆ ಮಾಡಿಲ್ಲ. ನಮ್ಮ ಚುನಾವಣಾ ಪ್ರಚಾರ ಎಂದಿನಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆ ದಿನಾಂಕ ಇನ್ನೂ ಎರಡು ಮೂರು ದಿನಗಳಲ್ಲಿ ತೀರ್ಮಾನವಾಗುತ್ತದೆ. ಮೋದಿ ಪ್ರಚಾರಕ್ಕೆ ಬರುವ ಬಗ್ಗೆ ನನಗೆ ಇನ್ನೂ ಸದ್ಯಕ್ಕೆ ಮಾಹಿತಿ ಇಲ್ಲ ಎಂದರು.
ಇದೇ ವೇಳೆ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್, ಶಾಸಕ ಶ್ರೀವತ್ಸ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ನಿರಂಜನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ನಗರಪಾಲಿಕೆ ಮಾಜಿ ಸದಸ್ಯ ಬಿ.ವಿ.ಮಂಜುನಾಥ್, ಬಿಜೆಪಿ ಮುಖಂಡರಾದ ಫಣೀಶ್, ಶಿವಕುಮಾರ್, ಶೈಲೇಂದ್ರ, ಮಹೇಶ್, ಡಾ.ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.