ಕರ್ತವ್ಯಲೋಪ ಹಿನ್ನೆಲೆ ಆರ್.ಆರ್.ಟಿ ಶಿರಸ್ತೇದಾರ್ ಅಮಾನತು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.20: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಕಛೇರಿಯ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಅವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳಾದ ಡಾ.ಜಿ.ಸಿ.ಪ್ರಕಾಶ್ ಆದೇಶಿಸಿದ್ದಾರೆ.
ಪಟ್ಟಣದ ತಾಲೂಕು ಕಛೇರಿಯ ಆರ್.ಆರ್.ಟಿ ಶಿರಸ್ತೆದಾರ್ ಆದ ಬಿ.ಆರ್.ರವಿ ಅವರು 2022 ಮತ್ತು 23 ನೇ ಸಾಲಿಗೆ ಸಂಬಂಧಪಟ್ಟ 241 ಕಡತಗಳನ್ನು ಉದ್ದೇಶಪೂರ್ವಕವಾಗಿ ಕಳೆದ 06 ತಿಂಗಳುಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ತಮ್ಮ ಬಳಿಯೇ ಇಟ್ಟುಕೊಂಡು ಸರ್ಕಾರಿ ಕೆಲಸದಲ್ಲಿ ನಿರ್ಲಕ್ಷತೆ ವಹಿಸಿ ಕರ್ತವ್ಯ ಲೋಪವೆಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಮತ್ತು ಶಿಸ್ತು ಪ್ರಾಧಿಕಾರಿಯಾದ ನಾನು ನನಗೆ ದತ್ವಾಗಿರುವ ಅಧಿಕಾರವನ್ನು ಚಲಾಯಿಸಿ ಬಿ.ಆರ್.ರವಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957 ರ ನಿಯಮ-10(1)(ಡಿ) ಮತ್ತು (3) ರ ಪ್ರಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿರುವುದಾಗಿ ಪ್ರಾದೇಶಿಕ ಆಯುಕ್ತರಾದ ಜಿ.ಸಿ.ಪ್ರಕಾಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಆರ್.ಆರ್.ಟಿ ಶಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ಹಲವಾರು ವರ್ಷಗಳಿಂದ ತಮ್ಮ ಬಳಿಯೇ ಇಟ್ಟುಕೊಂಡು ಸಕಾಲದಲ್ಲಿ ವಿಲೇ ಮಾಡದ ಬಗ್ಗೆ ಬಿ.ಆರ್.ರವಿ ವಿರುದ್ದ ವ್ಯಾಪಕವಾದ ಸಾರ್ವಜನಿಕ ದೂರುಗಳಿದ್ದವು. ಸಾರ್ವಜನಿಕರ ದೂರಿನ ಮೇರೆಗೆ 20-09-2023 ರಂದು ಮಂಡ್ಯ ಜಿಲ್ಲಾಧಿಕಾರಿಗಳು ಪಟ್ಟಣದ ತಾಲೂಕು ಕಛೇರಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಈ ಸಂದರ್ಭದಲ್ಲಿ ಶಿರಸ್ತೆದಾರ್ ಬಿ.ಆರ್.ರವಿ 2022 ಮತ್ತು 23 ನೇ ಸಾಲಿನ 241 ಕಡತಗಳನ್ನು ವಿಲೇ ಮಾಡದೆ ತಮ್ಮ ಬಳಿಯಲ್ಲಿಯೇ ನಿಯಮಬಾಹಿರವಾಗಿ ಇಟ್ಟುಕೊಂಡಿದ್ದು ಕಂಡು ಬಂದಿತ್ತು. ಇದನ್ನು ಆಧರಿಸಿ ಜಿಲ್ಲಾಧಿಕಾರಿಗಳು ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯೆ ಸಮನ್ವಯತೆ ಸಾಧಿಸುವ ಮಾತೃ ಇಲಾಖೆಯಾದ ಕಂದಾಯ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯವನ್ನ ಮೂಡಿಸುವಲ್ಲಿ ಸದರಿ ನೌಕರ ಕಾರಣಕರ್ತರಾಗಿದ್ದಾರೆಂದು ಹಾಗೂ ಸದರಿ ನೌಕರನಿಗೆ ಕಾರಣ ಕೇಳಿ ನೀಡಿದ ನೋಟೀಸ್ ನಲ್ಲಿ ಅವರು 241 ಅರ್ಜಿಗಳನ್ನು ತಾವು ಸಕಾಲದಲ್ಲಿ ವಿಲೇ ಮಾಡದಿರುವುದನ್ನು ಒಪ್ಪಿಕೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸದರಿ ನೌಕರನ ವಿರುದ್ದ ಮಂಡ್ಯ ಜಿಲ್ಲಾಧಿಕಾರಿಗಳು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಛೇರಿಗೆ ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ವರದಿ ಪರಿಶೀಲಿಸಿ ಪ್ರಾದೇಶಿಕ ಆಯುಕ್ತರಾದ ಜಿ.ಸಿ.ಪ್ರಕಾಶ್ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಅವರನ್ನು ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಅಮಾನತ್ತುಗೊಂಡಿರುವ ನೌಕರ ಬಿ.ಆರ್.ರವಿ ವಿರುದ್ದ 07.03.2024 ರಂದು ಪುರಸಭಾ ಸದಸ್ಯ ಹಾಗೂ ಜಿಲ್ಲಾ ಕುರುಬರ ಸಂಘದ ನಿರ್ದೇಶಕ ಕೆ.ಸಿ.ಮಂಜುನಾಥ್ ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿ ಮಾಡಿ ಆರ್.ಆರ್.ಟಿ ಶಿರಸ್ತೆದಾರ್ ಬಿ.ಆರ್.ರವಿ ಅವರು ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದು ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾದ್ದಾರೆಂದು ಆರೋಪಿಸಿ ಲಿಖಿತ ದೂರು ನೀಡಿದ್ದರು.