ಭೀಮಾ ನದಿಗೆ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ
ಕಲಬುರಗಿ:ಮಾ.19:ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಚಾವತ್ ಐ ತೀರ್ಪಿನಡಿ ನಮ್ಮ ಹಕ್ಕಿನ 5 ಟಿಎಂಸಿ ನೀರನ್ನು ಭೀಮಾ ನದಿಗೆ ಹರಿಸಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆಯ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ, ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದಿನದಿಂದ ದಿನಕ್ಕೆ ಭೀಮಾ ನದಿಯ ನೀರು ಬರಿದಾಗುತ್ತಿದ್ದು ಜಿಲ್ಲೆಯ ಸುಮಾರು ಜನರು ಭೀಮಾ ನದಿಯನ್ನೆ ಅವಲಂಬಿಸಿರುತ್ತಾರೆ. ಅದರಿಂದ ಸಾವಿರಾರು ಎಕರೆ ಜಮೀನುಗಳು ಉಪ ಜೀವನಕ್ಕಾಗಿ ಕಬ್ಬು ಮತ್ತು ಬಾಳೆ ಬೆಳೆಯನ್ನೇ ಅವಲಂಭಿಸಿರುತ್ತಾರೆ, ನೀರು ಹರಿಸದೇ ಇರುವದರಿಂದ ಸಾವಿರಾರು ಜಾನುವಾರುಗಳು ನೀರಿಲ್ಲದೆ ಸಾವನಪ್ಪುತ್ತಿವೆ. ನೀರಿನ ಸಮಸ್ಯೆ ಜಿಲ್ಲೆಯಲ್ಲಿ ಉಲ್ಬಣ ವಾಗುತ್ತಿದ್ದು, ಜನರು ಕುಡಿಯುವ ನೀರಿಗಾಗೆ ಭೀಮಾನದಿಯನ್ನೆ ಅವಲಂಬಿಸಿದ್ದು ಅಲ್ಲದೆ ವಿಶೇಷವಾಗಿ ಅಫಜಲಪುರ, ಜೇವರ್ಗಿ ತಾಲ್ಲೂಕಿನ ರೈತರು ನೀರಾವರಿಗಾಗಿ ಭಿಮಾನದಿಯನ್ನೆ ಅವಲಂಬಿಸಿರುತ್ತಾರೆ. ಕೂಡಲೇ ಉಜನಿ ಜಲಾಶಯದಿಂದ ನಮ್ಮ ಹಕ್ಕಿನ ಐದು ಟಿಎಂಸಿ ನೀರು ಭೀಮಾ ನದಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ ದೊಡ್ಡಮನಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಗುತ್ತೇದಾರ್, ಜಿಲ್ಲಾ ಸಂಚಾಲಕ ರಾಜು ನಿಂಬಾಳ್ಕರ್, ಗೌರವ ಅಧ್ಯಕ್ಷ ವೆಂಕಟೇಶ್ ಗುತ್ತೇದಾರ್, ರುಕ್ಮಯ್ಯ ಗುತ್ತೇದಾರ್, ಭಾಗ್ಯವಂತ್ ಗಡ್ಡಿಮನಿ, ಮೌನೇಶ್ ಬೆನಕನಹಳ್ಳಿ, ನಾಗರಾಜ್ ಸನ್ನೂರಕರ್, ಮಹಾಂತೇಶ್ ಸಣಮನಿ, ವಂದನಾ ಅಕ್ಕ, ಚಂದ್ರಕಾಂತ್ ಗುತ್ತೇದಾರ್, ದೇವು ರಾಜೋಳಿ, ಮೇಲು ಕೂಡದುರ, ದೇವು ಗಮಗಾ ಮುಂತಾದವರು ಪಾಲ್ಗೊಂಡಿದ್ದರು.