ನ್ಯಾಯವಾದಿ ಕೊಲೆ ಆರೋಪಿತಳಿಗೆ ಜಾಮೀನು ನಿರಾಕರಣೆ
ಕಲಬುರಗಿ,ಮಾ.19-ನ್ಯಾಯವಾದಿ ವೀರಣ್ಣಗೌಡ ಪೊಲೀಸ್ ಪಾಟೀಲ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಸಿದ್ದಮ್ಮ ನೀಲಕಂಠರಾವ ಪಾಟೀಲ ಅವರಿಗೆ ಜಾಮೀನು ನೀಡಲು ಇಲ್ಲಿನ 3ನೇ ಅಪರ ಜಿಲ್ಲ ಮತ್ತು ಸತ್ರ ನ್ಯಾಯಾಲಯ ನಿರಾಕರಿಸಿದೆ.
ಈ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಸಿದ್ದಮ್ಮ ನೀಲಕಂಠರಾವ ಪೊಲೀಸ್ ಪಾಟೀಲ ಅವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆರೋಪಿತಳಿಗೆ ಜಾಮೀನು ನೀಡಿದರೆ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾಯವಾದಿ ವೀರಣ್ಣಗೌಡ ಪೊಲೀಸ್ ಪಾಟೀಲ ಅವರು 7.12.2023 ರಂದು ರಂದು ಬೆಳಿಗ್ಗೆ 10.30ಗಂಟೆ ಸುಮಾರಿಗೆ ಉದನೂರ ತೋಟದ ಮನೆಯಿಂದ ಕೋರ್ಟಿಗೆ ಹೋಗುತ್ತೇನೆಂದು ಮನೆಯಿಂದ ಕೋರ್ಟ್ ಫೈಲ್ ತೆಗೆದುಕೊಂಡು ಬೈಕ್ ಮೇಲೆ ಕೋರ್ಟಿಗೆ ಹೋಗುತ್ತಿದ್ದಾಗ ಅವರನ್ನು ಬೆನ್ನಟ್ಟಿ ಗಂಗಾವಿಹಾರ ಅಪಾರ್ಟ್‍ಮೆಂಟ್‍ನಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಈ ಕೊಲೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ಸಂಬಂಧ ಐವರು ಆರೋಪಿಗಳ ವಿರುದ್ಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ತನಿಕಾಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, ಪ್ರಕರಣದ 5ನೇ ಆರೋಪಿ ಸಿದ್ದಮ್ಮ ನೀಲಕಂಠರಾವ ಪೊಲೀಸ್ ಪಾಟೀಲ ಅವರು ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಾದ ವಿವಾದಗಳನ್ನು ಆಲಿಸಿದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಕರೋಶಿ ಅವರು, ಆರೋಪಿತಳು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಕೊಲೆ ಆರೋಪಿಗಳಿಗೆ 50 ಸಾವಿರ ರೂ.ಸುಫಾರಿ ಕೊಟ್ಟಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿತಳಿಗೆ ಜಾಮೀನು ದೊರೆತಲ್ಲಿ ಸಾಕ್ಷ್ಯಾಧಾರಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಸರ್ಕಾರದ ಪರವಾಗಿ 3ನೇ ಅಪರ ಸರಕಾರಿ ಅಭಿಯೋಜಕರಾದ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದರು.