ಧನುಷ್ ಡಿ.ಆರ್‌ಗೆ ಜಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ
ಕೋಲಾರ,ಸೆ.೧೮:ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾ ಕೂಟದಲ್ಲಿ ಕೋಲಾರದ ಧನುಷ್ ಡಿ.ಆರ್ ಜಾವಲಿನ್ ಥ್ರೋನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿ ಕೊಂಡಿದ್ದಾರೆ.
ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಧನುಷ್ ೧೪ ವರ್ಷದೊಳಗಿನ ಬಾಲಕರ ವಿಭಾಗದ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಪಾಲ್ಗೊಂಡು ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಧನುಷ್ ೮ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಜಿಲ್ಲಾ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಯಾಗಿದ್ದು, ಇಲ್ಲಿನ ತರಬೇತುದಾರ ಎಂ.ವೆಂಕಟೇಶ್ ರವರಿಂದ ತರಬೇತಿ ಪಡೆದು, ರಾಜ್ಯ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಬೆಳ್ಳಿ ಪದಕ ಪಡೆದು, ಆಂಧ್ರ ಪ್ರದೇಶದ ವಿಜಯವಾಡದ ಗುಂಟೂರಿನಲ್ಲಿ ನಡೆಯುವ ದಕ್ಷಿಣ ವಲಯ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.
ಜಿಲ್ಲಾ ಪತಾಕೆಯನ್ನು ಮೈಸೂರುನಲ್ಲಿ ಹಾರಿಸಿ, ಜಿಲ್ಲೆಗೆ ಕೀರ್ತಿ ತಂದ ಧನುಷ್ ಹಾಗೂ ತರಬೇತುದಾರ ಎಂ.ವೆಂಕಟೇಶ್‌ರನ್ನು ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ, ಹಿರಿಯ ಕ್ರೀಡಾಪಟು ಹೆಚ್.ಜಗನ್ನಾಥನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ ಮತ್ತಿತರರು ಅಭಿನಂದಿಸಿದ್ದಾರೆ.