ಸೆ.20ಕ್ಕೆ ಕೇಂದ್ರ ರೇಷ್ಮೆಮಂಡಳಿಯ ಅಮೃತ ಮಹೋತ್ಸವ
ಸಂಜೆವಾಣಿ ನ್ಯೂಸ್
ಮೈಸೂರು: ಸೆ.18:- ಕೇಂದ್ರ ರೇಷ್ಮೆ ಮಂಡಳಿ 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸೆ.20ರಂದು ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ತಿಳಿಸಿದರು.
ನಗರದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕೇಂದ್ರ ಭಾರಿ ಕೈಗಾರಿಕೆ, ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ವಿದೇಶಾಂಗ ವ್ಯವಹಾರ, ಜವಳಿ ಖಾತೆ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟ, ರೈಲ್ವೆ, ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಉಪಸ್ಥಿತಿ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್ ಗೌಡ ಅತಿಥಿಗಳಾಗಿ ಭಾಗವಹಿಸುವರು ಎಂದು ತಿಳಿಸಿದರು.
ಮೊದಲ ಸ್ಥಾನದ ಗುರಿ: 1948ರಲ್ಲಿ ಆರಂಭವಾದ ಕೇಂದ್ರ ರೇಷ್ಮೆ ಮಂಡಳಿಯಡಿ ದೇಶಾದ್ಯಂತ 159 ಘಟಕಗಳಿದ್ದು, 9 ಸಂಶೋಧನಾ ಸಂಸ್ಥೆಗಳು ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಪ್ರಸ್ತುತ ರೇಷ್ಮೆ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. 2023-24ರಲ್ಲಿ ವಿಶ್ವದ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಶೇ.42ರಷ್ಟು ಪಾಲು ಹೊಂದಿದೆ.
2023-24ರಲ್ಲಿ 2028 ಕೋಟಿ ಮೌಲ್ಯದ ರೇಷ್ಮೆ ರಫ್ತು ಮಾಡಲಾಗಿದೆ. 2.63 ಲಕ್ಷ ಎಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದ್ದು, ಕಚ್ಚಾ ರೇಷ್ಮೆ ಪ್ರಮಾಣವೂ ಏರಿಕೆಯಾಗಿದೆ. 2047ರ ವೇಳೆಗೆ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೇಷ್ಮೆ ಆಮದು ಇಳಿಕೆ: ಚೀನಾದಿಂದ ಕಚ್ಚಾ ರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೀಗ ಆಮದು ಪ್ರಮಾಣ ಇಳಿಕೆಯಾಗಿದೆ. 2022-23ನ್ನು ಹೊರತುಪಡಿಸಿದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಆಮದು ಮಾಡಿಕೊಂಡಿಲ್ಲ. ಭಾರತದಿಂದಲೇ ಸುಮಾರು 950 ಮೆಟ್ರಿಕ್ ಟನ್ ರೇಷ್ಮೆ ಗೂಡನ್ನು ರಫ್ತು ಮಾಡಲಾಗಿದೆ ಎಂದರು.
ರೇಷ್ಮೆ ಕೇವಲ ಬಟ್ಟೆ ತಯಾರಿಕೆಗೆ ಮಾತ್ರವಲ್ಲದೆ ಆಹಾರ, ಔಷಧ, ಸೌಂದರ್ಯವರ್ಧಕಗಳ ತಯಾರಿಕೆಗೂ ಬಳಕೆಯಾಗುತ್ತಿದೆ. ಹಿಪ್ಪುನೇರಳೆ ಎಲೆಗಳನ್ನು ಸಕ್ಕರೆ ಕಾಯಿಲೆಗೆ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಇದರಿಂದಾಗಿ ರೈತರಿಗೆ ಹೆಚ್ಚು ಲಾಭವಾಗುತ್ತದೆ. ರೇಷ್ಮೆ ಬೆಳೆಗಾರರಿಗೆ ಈ ನಿಟ್ಟಿನಲ್ಲಿ ಅಗತ್ಯ ತರಬೇತಿ ನೀಡಲಾಗುತ್ತಿದ್ದು, ರೇಷ್ಮೆ ಉಪ ಉತ್ಪನ್ನ ಮಾಡುವವರಿಗೆ ಸ್ಟಾರ್ಟ್‍ಅಪ್ ಆರಂಭಿಸಲು ಉತ್ತೇಜನ ನೀಡಲಾಗುತ್ತಿದೆ ಎಂದರು.
ವಾಣಿಜ್ಯ ಬೆಳೆಗಳ ಪೈಪೆÇೀಟಿ, ಕೃಷಿ ಪ್ರದೇಶ ಇಳಿಕೆ, ಯುವಕರ ಬದಲಾದ ಆಸಕ್ತಿಯಿಂದಾಗಿ ರೇಷ್ಮೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಇದರಲ್ಲಿ ರಿಯಲ್ ಎಸ್ಟೇಟ್ ಪಾತ್ರವೂ ಇದೆ. ಕೋವಿಡ್‍ನಿಂದಾಗಿಯೂ ರೇಷ್ಮೆ ಉತ್ಪಾದನೆ ಕುಂಠಿತವಾಗಿತ್ತು. ಕಳೆದ ಎರಡು ಮೂರು ವರ್ಷಗಳಿಂದ ಚೇತರಿಕೆಯಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಟಿಎಸ್‍ಎಸ್‍ಒ ನಿರ್ದೇಶಕ ಡಾ.ಸೆಲ್ವಕುಮಾರ್, ಸಿಟಿಆರ್‍ಟಿಐ ನಿರ್ದೇಶಕ ಎನ್.ಬಿ.ಚೌದರಿ, ಎಂಇಎಸ್‍ಎಸ್‍ಒ ನಿರ್ದೇಶಕ ಡಾ.ಎನ್.ಕೆ.ಭಾಟಿಯ, ಸಿಎಸ್‍ಆರ್‍ಟಿಐ ನಿರ್ದೇಶಕ ಡಾ.ಗಾಂಧಿ ದಾಸ್ ಇದ್ದರು.