ಹೆಲ್ಮೆಟ್ ಜಾಗೃತಿ ಜಾಥ: ಸಂಚಾರಿ ನಿಯಮಗಳನ್ನು ಪಾಲಿಸಬೇಕು
ಸಂಜೆವಾಣಿ ವಾರ್ತೆ
ಸಿರುಗುಪ್ಪ:ಮಾ,19- ವಾಹನ ಚಲಾಯಿಸುವವರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತಮ್ಮ ಜೀವ ಉಳಿಸಿಕೊಳ್ಳುವ ಜೊತೆಗೆ ಇತರರ ಜೀವ ರಕ್ಷಣೆ ಮಾಡಬೇಕೆಂದು ಡಿ.ವೈ.ಎಸ್.ಪಿ. ವೆಂಕಟೇಶ್ ತಿಳಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆ, ಸಿರುಗುಪ್ಪ ಪೊಲೀಸ್ ಉಪವಿಭಾಗ, ಸಿರುಗುಪ್ಪ ವೃತ್ತದ ವತಿಯಿಂದ ಹಮ್ಮಿಕೊಂಡಿದ್ದ ಸಂಚಾರಿ ನಿಯಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಹಮ್ಮಿಕೊಂಡಿದ್ದ ಬೈಕ್ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ಹೆಜ್ಜೆ ಹೆಜ್ಜೆಯಲ್ಲು ರಸ್ತೆ  ಸುರಕ್ಷತಾ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು, ಸಾರ್ವಜನಿಕರು ಸಂಚಾರ ನಿಯಮ ಪಾಲನೆ ವಿಚಾರದಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕು.
ಬೈಕ್ ಓಡಿಸುವ ಮುನ್ನ ಹೆಲ್ಮೇಟ್ ಧರಿಸುವುದು ಮರೆಯಬೇಡಿ, ಮೊದಲು ಸುರಕ್ಷತೆಯ ಬ್ಗೆ ಯೋಚಿಸಿ ನಂತರ ಚಾಲನೆ ಮಾಡಿ, ಅಪಘಾತಗಳು ಮಾನವ ತಪ್ಪುಗಳು, ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಚ್ಚರವಿರಬೇಕು, ಮನೆಗೆ ಸಮೀಪದಲ್ಲಿರುವ ಅಂಗಡಿಗೆ ಹೋಗಿದ್ದೆ ಅದಕ್ಕಾಗಿ ಹೆಲ್ಮೇಟ್ ಧರಿಸಲಿಲ್ಲ, ಕೂಗಳತೆ ದೂರದಲ್ಲಿನ್ನ ತೋಟಕ್ಕೆ ಹೋಗಿದ್ದೆ ಅಷ್ಟು ಹತ್ತಿರಕ್ಕೆಲ್ಲ ಹೆಲ್ಮೇಟ್ ಹಾಕಬೇಕೆ ಎಂಬ ಸಬೂಬುಗಳನ್ನು ಹೇಳಬಾರದು.  ವಾಹನ ಹತ್ತಿದಾಕ್ಷಣ ನಿಯಮಗಳು ಅನ್ವಯವಾಗುತ್ತವೆ, ಹೆಲ್ಮೇಟ್ ಧರಿಸದೇ ಇರುವುದು ಕಾನೂನು ಉಲ್ಲಂಘನೆಯಾಗುತ್ತದೆ. ಅಜಾಗರೂಕತೆಗೆ ಅವಕಾಶ ನೀಡದೆ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು.
ಕಾನೂನು ಕಾಯ್ದೆಗಳು ಜನಸಾಮಾನ್ಯರ ಹಿತದೃಷ್ಟಿಯಿಂದ ಜಾರಿಗೆ ತರಲಾಗಿದೆ.  ವಾಹನ ಚಾಲನೆ ಮಾಡುವಾಗ ತಪ್ಪದೆ ಹೆಲ್ಮೇಟ್ ಧರಿಸಬೇಕು, ನಿಯಮಗಳನ್ನು ಮೀರುತ್ತಿರುವ ಬಹುತೇಕ ಯುವಜನರು ಸರಿಯಾದ ಮಾರ್ಗದಲ್ಲಿ ನಡೆಯಬೇಕು, ಇಲ್ಲದಿದ್ದರೆ ಕಾನೂನು ದಂಡನೆಯನ್ನು ಎದರುಸಬೇಕಾಗುತ್ತದೆ. ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೇಟ್ ಧರಿಸಿ, ಚಾಲನೆ ವೇಳೆ ಮೊಬೈಲ್ ಬಳಕೆ ಬೇಡ, ದ್ವಿಚಕ್ರ ವಾಹನದಲ್ಲಿ ತ್ರಿಬಲ್‌ರೈಡಿಂಗ್, ಸೀಟ್‌ಬೆಲ್ಟ್ ಧರಿಸದೇ ಇರುವುದು, ಸೈಡ್ ಮಿರರ್ ಇಲ್ಲದ ವಾಹನ, ತುರ್ತು ವಾಹನಗಳಿಗೆ ದಾರಿ ಬಿಡದಿರುವುದು, ಅಜಾಗರೂಕತೆ ವಾಹನ ಚಾಲನೆ ಮುಖ್ಯವಾಗಿ ಅಪ್ರಾಪ್ರರ ವಾಹನ ಚಾಲನೆ ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಶಂಶಾಲಂ, ತಾ.ಪಂ.ಇ.ಒ. ಪವನ್‌ಕುಮಾರ್, ಸಿ.ಪಿ.ಐ.ಗಳಾದ ಹನುಮಂತಪ್ಪ, ರುದ್ರಪ್ಪ, ಸುಂದರೇಶ, ಸತೀಶ್, ಪಿ.ಎಸ್.ಐ. ತಿಮ್ಮಣ್ಣ ನಾಯಕ ಮತ್ತು ಪೊಲೀಸರು ಇದ್ದರು.