ಸ್ವಯಂಪ್ರೇರಿತ ಬಂದ್ ಗೆ ಬೆಂಬಲ: ಸಿದ್ರಾಮಯ್ಯ ಚೌಕಿಮಠ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸಿ ಹೋರಾಟಕ್ಕೆ ಬೆಂಬಲಿಸಿ
ಅಫಜಲಪುರ:ಮಾ.19: ಈ ಭಾಗದ ಜನರ ಜೀವನಾಡಿ ಭೀಮಾ ಅಣೆಕಟ್ಟು ಬರಗಾಲದಿಂದ ಬತ್ತಿ ಹೋಗಿದೆ. ರೈತರು ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಸಂಕಷ್ಟ ಎದುರಿಸುವಂತಾಗಿದೆ ಎಂದು ತಾಲೂಕಿನ ಅತನೂರು ಗ್ರಾಮದ ಕನ್ನಡಪರ ಹೋರಾಟಗಾರ ಸಿದ್ರಾಮಯ್ಯ ಚೌಕಿಮಠ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ 5 ಟಿಎಂಸಿ ನೀರು ಹರಿಸುವಂತೆ ಒತ್ತಾಯಿಸಿ
ಕಳೆದ ನಾಲ್ಕೈದು ದಿನಗಳಿಂದ ಪ್ರತಿಭಟನೆಯ ನೇತೃತ್ವ ವಹಿಸಿದ ಶಿವಕುಮಾರ ನಾಟೀಕಾರ ಅವರ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು ರೈತರ ಹೆಸರು ಹೇಳಿಕೊಂಡೆ ಅಧಿಕಾರಕ್ಕೆ ಬರುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಅಧಿಕಾರಕ್ಕೆ ಬಂದ ನಂತರ ತಾವು ಕೊಟ್ಟ ವಚನವನ್ನೇ ಮರೆತುಬಿಡುತ್ತಿರುವುದು ಆತಂಕದ ಸಂಗತಿಯಾಗಿದೆ. ತಮಿಳುನಾಡು ರಾಜ್ಯಕ್ಕೆ ನಮ್ಮ ರಾಜ್ಯದ ಕಾವೇರಿ ನೀರು ಹರಿಸದಿದ್ದರೆ ಸುಪ್ರೀಂಕೋರ್ಟ್ ಮಾತನಾಡುತ್ತದೆ ಮತ್ತು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಹರಿಸುತ್ತಾರೆ. ಆದರೆ ನಮ್ಮ ಭಾಗದಲ್ಲಿ ಮಾತ್ರ ನಮ್ಮ ಹಕ್ಕಿನ ನೀರು ಕೊಡಲು ತಾರತಮ್ಯ ಏಕೆ ಎಂದು ಸರ್ಕಾರಕ್ಕೆ ಪ್ರಶ್ನಿಸಿದರು. ವಿಶೇಷವಾಗಿ ರೈತರಿಗೋಸ್ಕರ ಹಮ್ಮಿಕೊಂಡ ಈ ಧರಣಿ ಸತ್ಯಾಗ್ರಹಕ್ಕೆ ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಕರೆ ನೀಡಿದ ಅವರು ನಾಳೆ ಬುಧವಾರದಂದು ಪಟ್ಟಣದ ಸಾರ್ವಜನಿಕ ವ್ಯಾಪಾರಸ್ಥರು, ಉದ್ದಿಮೆದಾರರು ಹಾಗೂ ಎಲ್ಲ ವರ್ಗದ ವರ್ತಕರ ಸಂಘದ ಮುಖ್ಯಸ್ಥರು ಸ್ವಯಂಪ್ರೇರಿತ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದು ನಾವು ಈ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವ ಮೂಲಕ ಬೆಂಬಲ ಸೂಚಿಸುತ್ತೇವೆ ಎಂದರು.
ಈ ವೇಳೆ ಅತನೂರ ಗ್ರಾ.ಪಂ ಮಾಜಿ ಅಧ್ಯಕ್ಷ
ಮಲ್ಲಿಕಾರ್ಜುನ ಖರ್ಗೆ,ಎಸ್.ಡಿ.ಎಂ.ಸಿ ಅಧ್ಯಕ್ಷ
ರಾಜು ಶೆಟ್ಟಿ, ಬಸವದಳ ಅಧ್ಯಕ್ಷ ಚಂದ್ರಕಾಂತ ಅತನೂರ ಸೇರಿದಂತೆ ಅನೇಕರಿದ್ದರು.