ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಹಾಲಿ, ಮಾಜಿ ಶಾಸಕರ ಬೆಂಬಲನಾಳೆ ಅಫಜಲಪುರ ಪಟ್ಟಣ ಅಘೋಷಿತ ಬಂದ್ ಗೆ ವರ್ತಕರಿಂದ ಬೆಂಬಲ
ಅಫಜಲಪುರ:ಮಾ.19: ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ಅಣೆಕಟ್ಟಿಗೆ 5 ಟಿ.ಎಂ.ಸಿ ನೀರು ಹರಿಸಬೇಕೆಂದು ಒತ್ತಾಯಿಸಿ ಹಮ್ಮಿಕೊಂಡ ಅಮರಣಾಂತ ಉಪವಾಸ ಧರಣಿ ಸತ್ಯಾಗ್ರಹ 4 ದಿನಗಳನ್ನು ಪೂರೈಸಿ ಯಶಸ್ವಿ 5ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆ ಪಟ್ಟಣದ ನಿವಾಸಿಗಳು ಸೇರಿದಂತೆ ಹಾಲಿ ಮತ್ತು ಮಾಜಿ ಶಾಸಕರು ಬೆಂಬಲ ಸೂಚಿಸಿದರು.
ನಂತರ ಶಾಸಕ ಎಂ.ವೈ ಪಾಟೀಲ ಮಾತನಾಡಿ ಬತ್ತಿದ ಭೀಮಾ ನದಿಯಿಂದ ರೈತರು ಹಾಗೂ ಜನ ಜಾನುವಾರಗಳು ಕುಡಿಯುವ ನೀರಿಗಾಗಿ ಸಂಕಷ್ಟ ಪಡುವಂತಾಗಿದೆ. ಹೀಗಾಗಿ ತಮ್ಮ ನ್ಯಾಯಯುತ ಹೋರಾಟವನ್ನು ಸರ್ಕಾರದ ಮುಂದೆ ಪ್ರಸ್ತಾಪಿಸಿ ನೀರು ಹರಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವ ಮಾಲೀಕಯ್ಯಾ ಗುತ್ತೇದಾರ್ ಮಾತನಾಡಿ ಭೀಮಾ ಅಣೆಕಟ್ಟು ನಿರ್ಮಾಣದಿಂದ ಹಿಡಿದು ಇಲ್ಲಿವರೆಗೂ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಉಜನಿ ಜಲಾಶಯದಿಂದ ನೀರು ಹರಿಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಧರಣಿ ಸತ್ಯಾಗ್ರಹದ ರೂವಾರಿ ಶಿವಕುಮಾರ ನಾಟೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನೆಗೆ ಮುಖಂಡರಾದ ಮತೀನ್ ಪಟೇಲ್, ಸಿದ್ದಾರ್ಥ ಬಸರಿಗಿಡ, ರಮೇಶ್ ಪೂಜಾರಿ, ಚಿದಾನಂದ ಮಠ, ಪ್ರಭಾವತಿ ಮೇತ್ರಿ ಸೇರಿದಂತೆ ಅನೇಕರು ಬೆಂಬಲ ಸೂಚಿಸಿ ಮಾತನಾಡಿದರು.
ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಮಾ. 20 ರ ಬುಧವಾರದಂದು ಅಫಜಲಪುರ ಪಟ್ಟಣ ಅಘೋಷಿತ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ಅಂದಿನ ದಿನ ವ್ಯಾಪಾರಿಗಳು, ವರ್ತಕರ ಸಂಘದ ಮುಖ್ಯಸ್ಥರು ಸ್ವಯಂಘೋಷಿತ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಿರತ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ.