ಕಬ್ಬಿನ ಬೆಳೆಯಲ್ಲಿ ಗೊಣ್ಣೆ ಹುಳು ನಿರ್ವಹಣೆ
ಮುನವಳ್ಳಿ,ಮಾ19 : ಕಬ್ಬಿನಲ್ಲಿ ಮೆಟರೈಸಿಯಂ ಅಣುಜೀವಿ ಗೊಬ್ಬರ ಹಾಗೂ ಲಿಂಗ ಆಕರ್ಷಕ ಬಲೆಗಳನ್ನು ಸಾಮೂಹಿಕವಾಗಿ ರೈತರು ಅಳವಡಿಸಿಕೊಳ್ಳುವುದರಿಂದ ಪರಿಣಾಮಕಾರಿಯಾಗಿ ಗೊಣ್ಣೆ ಹುಳು ನಿರ್ವಹಣೆ ಮಾಡಬಹುದು ತಜ್ಞರು ಎಸ್, ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಡಾ. ಮಂಜುನಾಥ ಚವರಡ್ಡಿ ತಿಳಿಸಿದರು.
ಅವರು 2023-24 ನೇ ಸಾಲಿನ ಆತ್ಮಯೋಜನೆ ಅಡಿ ಕೃಷಿ ಇಲಾಖೆ ಸವದತ್ತಿ ಶ್ರೀ ರೇಣುಕಾ ಶುಗರ್ಸ್ ಮುನವಳ್ಳಿ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಯಕ್ಕುಂಡಿ ಗ್ರಾಮ ಪಂಚಾಯತ ಸಭಾಭವನದಲ್ಲಿ ಕಬ್ಬಿನಲ್ಲಿ ಬರುವ ಗೊಣ್ಣೆ ಹುಳುವಿನ ಸಮಗ್ರ ನಿರ್ವಹಣೆಯ ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು. ರೈತ ಬಾಂಧವರು ಗೊಣ್ಣೆ ಹುಳುವಿನ ಮರಿ ಹತೋಟಿ ಜೊತೆಗೆ ಅದರ ಪ್ರೌಡಾವಸ್ಥೆ ಕೀಟಗಳನ್ನು ಬೇಸಿಗೆಯಲ್ಲಿ ಸಮಗ್ರವಾಗಿ ಹಾಗೂ ಸಾಮೂಹಿಕವಾಗಿ ಜೈವಿಕ ಗೊಬ್ಬರಗಳಾದ ಮೆಟರೈಸಿಯಂ ಬಳಸಿ ಹತೋಟಿ ಮಾಡಬೆಕು. ಕಬ್ಬಿನ ರವದಿಯನ್ನು ಸುಡದೆ ರೈತರು ಟ್ರೈಕಾಡರ್ಮ ಬಳಸಿ ಕೊಳೆಯುವಂತೆ ಮಾಡಿ ಹೊಲಕ್ಕೆ ಗೊಬ್ಬರವಾಗಿ ಪರಿವರ್ತಿಸಬಹುದು ಎಂದರು.
ಗ್ರಾಮ ಪಂಚಾಯತ ಅಧ್ಯಕ್ಷೆ ಪೀರೋಜ ಬಾರಿಗಿಡದ ಉದ್ಘಾಟಿಸಿದರು, ಬಸವರಾಜ ಬಿರುಕಲ್ ಮಾತನಾಡಿ ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲತ್ತುಗಳು ಹಾಗೂ ಹೊಸದಾಗಿ ಬಂದಿರುವ ಪ್ರಧಾನ ಮಂತ್ರಿ ಆಹಾರ ಸಂಸ್ಕರಣೆ ಘಟಕ ಕುರಿತು ರೈತರಿಗೆ ಮಾಹಿತಿ ನೀಡಿದರು.
ಮಹಾವೀರ ಮಲಗಡನವರ, ಅಶೋಕ ಬಾಡ್ಸಿ, ಮೋಸಬಿ ಇಮ್ಮಣ್ಣವರ, ಕೃಷ್ಣಕುಮಾರ, ಶೇಖವ್ವ, ಗೋರಿಮಾ ದಿನ್ನಿಮನಿ, ಸಾಹಿಬಾ ದಿನ್ನಿಮನಿ, ನಾಗರಾಜಗೌಡ ಪಾಟೀಲ, ಪಂಚಾಯತಿ ಅಭಿವೃದ್ದಿ ಅಧಿಕಾರಿ ಬೊಳಶೆಟ್ಟಿ ಮಹೇಶ ಜೈನರ, ಕೃಷಿ ಇಲಾಖೆಯ ಸಿಬ್ಬಂದಿಗಳು ಹಾಗೂ ರೈತರು ಇತರರು ಉಪಸ್ಥಿತರಿದ್ದರು.
ಪ್ರವೀಣ ಕೊಟ್ಟಲಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.