ಶಾಂತಿ, ಸೌಹಾರ್ದತೆಯಿಂದ ಹೋಳಿ ಆಚರಿಸಿ
ಬಾಗಲಕೋಟೆ: ಮಾ19 : ಪ್ರತಿ ವರ್ಷದಂತೆ ಈ ವರ್ಷವೂ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೇ ಶಾಂತಿ, ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ತಿಳಿಸಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಜರುಗಿದ ಹೋಳಿ ಹಬ್ಬದ ಕುರಿತ ಶಾಂತತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕಿದೆ. ಹೋಳಿ ಹಬ್ಬದ ಜೊತೆ ರಂಜಾನ ಹಬ್ಬವು ಸಹ ಬಂದಿರುವುದರಿಂದ ಎಲ್ಲವೂ ಸುಸೂತ್ರವಾಗಿ ನಡೆಸಬೇಕಿದೆ. ಸಂತೋಷದಿಂದ ಪರಸ್ಪರ ಸೌಹಾರ್ದತೆಯಿಂದ ಹೋಳಿ ಹಬ್ಬ ಆಚರಿಸುವಂತೆ ಹೋಳಿ ಸಮಿತಿಗೆ ಕರೆ ನೀಡಿದರು.
ಮಾರ್ಚ 23 ಸಂಜೆ ಹೋಳಿ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಮಾರ್ಚ 24 ರಿಂದ 28 ವರೆಗೆ ಹೋಳಿ ಆಚರಣೆ ಸಂಭ್ರಮದಿಂದ ಆಚರಣೆ ಮಾಡಲು ತಿಳಿಸಿದ ಅವರು ಈ ಬಾರಿ ವಿದ್ಯಾಗಿರಿ, ಹಳೆ ಬಾಗಲಕೋಟೆಯ ಬಸವೇಶ್ವರ ಸರ್ಕಲ್ ಹಾಗೂ ಕಿಲ್ಲಾ ಸೇರಿ ಮೂರು ಕಡೆಗಳಲ್ಲಿ ರೇನ್ ಡಾನ್ಸ್ ಕಾರ್ಯಕ್ರಮ ನಡೆಸಲು ತಿಳಿಸಿದ್ದು, ಆ ಸ್ಥಳದಲ್ಲಿ ಅಗತ್ಯ ಪುರುಷರ ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಜೊತೆಗೆ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ ಸಾಂಸ್ಕøತಿ ಪ್ರತೀಕವಾದ ಹೋಳಿ ಹಬ್ಬವನ್ನು ಸೌಹಾರ್ದತೆಯಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಆಚರಣೆ ಮಾಡಬೇಕು. ಬರಗಾಲ ಪರಿಸ್ಥಿತಿ ಇರುವದರಿಂದ ಹಬ್ಬದ ಆಚರಣೆಯಲ್ಲಿ ಮಿತವಾಗಿ ನೀರನ್ನು ಬಳಸಬೇಕು. ಚುನಾವಣೆ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ ಬಣ್ಣ ಹಾಕಬೇಡಿ. ಕರ್ತವ್ಯದಲ್ಲಿರುವವರಿಗೆ ಗುರುತಿನ ಚೀಟಿ ನೀಡಲಾಗಿದೆ. ಧ್ವನಿವರ್ಧಕ, ಬ್ಯಾನರ್ ಕಟೌಟ್ ಹಾಕುತ್ತಿದ್ದರೆ, ಅದರ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳಲು ತಿಳಿಸಿದರು.
ವಿವಿಧ ಹೋಳಿ ಸಮಿತಿಯ ಹೋಳಿ ಆಚರಣೆ ಕುರಿತ ಮಾಹಿತಿಯನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಡಿವಾಯ್‍ಎಸ್‍ಪಿ ಪಂಪನಗೌಡ ಸೇರಿದಂತೆ ಹೋಳಿ ಸಮಿತಿಯ ಪ್ರತಿನಿಧಿಗಳಾದ ಕಳಕಪ್ಪ ಬಾದವಾಡಗಿ, ಕುಂದವಾಡ, ಮಹಾಂತೇಶ ಗುಡಗುಂಟಿ, ವೀರಣ್ಣ ಬಂಗಾರಶೆಟ್ಟರ, ಶವು ಮೇಲ್ನಾಡ, ಟಂಕಸಾಲಿ, ಶ್ರವಣ ಖಾತೇದಾರ ಹಾಗೂ ಇತರರು ಉಪಸ್ಥಿತರಿದ್ದರು.