ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ೨೧೯೭೨ ಪ್ರಕರಣ ಇತ್ಯರ್ಥ
ಕೋಲಾರ, ಮಾ. ೧೯- ಜಿಲ್ಲಾ ನ್ಯಾಯಾಲಯದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಒಟ್ಟು ೨೧೯೭೩ ಪ್ರಕರಣಗಳು ಇತ್ಯರ್ಥಗೊಂಡಿದ್ದು, ೩೫,೫೨,೨೪,೭೩೭ ರೂ ಪರಿಹಾರ ಮೊತ್ತದ ಪ್ರಕರಣಗಳು ಇತ್ಯರ್ಥವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ.ಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಕ್ಷಿದಾರರು ಹಾಗೂ ವಕೀಲರು ಸೇರಿ ನಡೆಸಿದ ರಾಷ್ಟ್ರೀಯ ಲೋಕದಾಲತ್ ಬೈಠಕ್‌ಗಳಲ್ಲಿ ಸಕ್ರಿಯವಾಇಗ ಪಾಲ್ಗೊಂಡು ತಮ್ಮ ತಮ್ಮ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ರಾಜೀ ಸಂಧಾನ ಮಾಡಿಕೊಂಡಿದ್ದು, ಇವುಗಳಲ್ಲಿ ೭೯ ಕ್ರಿಮಿನಲ್ ಪ್ರಕರಣ, ೩೦೧ ಚೆಕ್ ಬೌನ್ಸ್ ಪ್ರಕರಣ, ೧೬ ಕೌಟುಂಬಿಕ ವ್ಯಾಜ್ಯ, ವಿಭಾಗಕ್ಕೆ ಸಂಬಂಧಿಸಿದ ೯೫, ಇತರೆ ಸಿವಿಲ್ ಪ್ರಕರಣ ೩೭೯, ಮೋಟಾರ್ ವಾಹನ ಅಪಘಾತ ಪರಿಹಾರ ಪ್ರಕರಣಗಳು ೪೭, ಇತರೆ ಕ್ರಿಮಿನಲ್ ಪ್ರಕರಣಗಳು ೧೦೦೩೨ ಸೇರಿದಂತೆ ಒಟ್ಟು ೧೦೯೬೦ ನ್ಯಾಯಾಲಯದಲ್ಲಿ ಚಾಲ್ತಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ೧೧೦೧೩ ಪ್ರಕರಣಗಳು ಸೇರಿವೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದ ಪ್ರಕರಣಗಳ ಇತ್ಯರ್ಥಕ್ಕೆ ರಾಷ್ಟ್ರೀಯ ಲೋಕ್ ಅದಾಲತ್‌ಗೆ ಸಹಕಾರ ನೀಡಿದ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ, ಕಾರ್ಯದರ್ಶಿ ಬೈರಾರೆಡ್ಡಿ ಹಾಗೂ ಪದಾಧಿಕಾರಿಗಳು, ಎಲ್ಲಾ ವಕೀಲರು, ನ್ಯಾಯಾಧೀಶರು, ಸಿಬ್ಬಂದಿ ಹಾಗೂ ಪಕ್ಷಗಾರರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಕರಣಗಳ ಶೀಘ್ರ ವಿಲೇವಾರಿ ಜತೆಗೆ ಪರಸ್ಪರ ಸೌಹಾರ್ದತೆ ಕಾಪಾಡುವಲ್ಲಿ, ನ್ಯಾಯಾಲಯಕ್ಕೆ ಅಲೆದಾಟ, ಹಣ ವ್ಯಯ ತಪ್ಪಿಸುವಲ್ಲಿ ಅದಾಲತ್‌ಗಳು ಹೆಚ್ಚು ಸಹಕಾರಿಯಾಗಿದ್ದು, ಜನತೆ ಇದರ ಸದುಪಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ.