ತಹಶೀಲ್ದಾರ್‌ರಿಂದ ಮತಗಟ್ಟೆಗಳ ಪರಿಶೀಲನೆ
ವಿಜಯಪುರ:ಏ.೨೬ ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾನುವಾರ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್ ಶಿವರಾಜ್ ಅವರು, ಗುರಪ್ಪನಮಠ ಶಾಲೆಯ ಮತಗಟ್ಟೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಮತಗಟ್ಟೆಗಳಲ್ಲಿ ವಿದ್ಯುತ್ ಸೌಲಭ್ಯ, ಬೆಳಕಿನ ಸೌಲಭ್ಯ, ಶೌಚಾಲಯಗಳ ವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ಗುರಪ್ಪನಮಠ ಸರ್ಕಾರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ, ಮತದಾನ ಮಾಡುವುದಕ್ಕೆ ಬರುವ ಮತದಾರರಿಗೆ ತೊಂದರೆಯಾಗದಂತೆ ಕಾಮಗಾರಿಗಾಗಿ ಇಲ್ಲಿ ಸಂಗ್ರಹಿಸಿರುವ ಕಬ್ಬಿಣದ ಕಂಬಿ, ಮರಗಳನ್ನು ತೆರವುಗೊಳಿಸಬೇಕು. ಕಾಮಗಾರಿ ನಡೆಯುತ್ತಿರುವ ಜಾಗದ ಸುತ್ತಲೂ ಶೀಟ್ ಅಳವಡಿಸುವಂತೆ ಚುನಾವಣಾಧಿಕಾರಿ ವಿಷ್ಣುವರ್ಧನ ರೆಡ್ಡಿ ಶಾಲಾ ಸಿಬ್ಬಂದಿಗೆ ಸೂಚನೆ ನೀಡಿದರು.
ಗುರಪ್ಪನಮಠ ಶಾಲೆಯ ಮತಗಟ್ಟೆಯ ಕೇಂದ್ರದಲ್ಲಿ ಒಂದು ಶೌಚಾಲಯ ಮಾತ್ರವಿದ್ದು, ಮತದಾನದ ದಿನದಂದು ತಾತ್ಕಾಲಿಕವಾಗಿ ಶೌಚಾಲಯವನ್ನು ಅಳವಡಿಕೆ ಮಾಡಬೇಕು. ಗುರಪ್ಪನಮಠ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ೭ ಮತಗಟ್ಟೆಗಳಲ್ಲಿಯೂ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಪರಿಶೀಲನೆ ನಡೆಸಲಾಗಿದೆ. ತಾಲ್ಲೂಕಿನಲ್ಲಿ ೨೯೨ ಮತಗಟ್ಟೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಹೋಬಳಿಯ ಚಂದೇನಹಳ್ಳಿ ಗೇಟ್ ಹಾಗೂ ವೆಂಕಟಗಿರಿಕೋಟೆ ಗೇಟ್, ಹಾಗೂ ವಿಜಯಪುರ-ಎಚ್.ಕ್ರಾಸ್ ರಸ್ತೆಯಲ್ಲಿ ಚನ್ನರಾಯಪಟ್ಟಣ ರಸ್ತೆಯ ತಿರುವಿನಲ್ಲಿ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ತಪಾಸಣಾ ಕೇಂದ್ರಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ತಹಶೀಲ್ದಾರ ಶಿವರಾಜ್ ಅವರು ತಿಳಿಸಿದರು.
ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಸತ್ಯನಾರಾಯಣ, ಗ್ರಾಮಲೆಕ್ಕಾಧಿಕಾರಿ ಮಡಿವಾಳಪ್ಪ, ಪುರಸಭೆ ಸಿಬ್ಬಂದಿ ಗೋಪಿಕೃಷ್ಣ, ಅಜ್ಮತ್, ಮಂಜುನಾಥ್ ಇದ್ದರು.