ಡಯಾಲಿಸಿಸ್‍ನಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ
ಸಂಜೆವಾಣಿ ನ್ಯೂಸ್
ಮೈಸೂರು: ಮಾ.19:- ಮೂತ್ರಪಿಂಡ ವೈಫಲ್ಯದ ಸಂದರ್ಭಗಳಲ್ಲಿ ಮಾಡುವ ಡಯಾಲಿಸಿಸ್ ವೇಳೆ ಬಳಸುವ ನೀರಿನಿಂದ ಸೋಂಕು, ಅಗತ್ಯ ರಾಸಾಯನಿಕ ಮಿಶ್ರಣವನ್ನು ವ್ಯಕ್ತಿಗಳೇ ಮಾಡುವುದರಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಇದನ್ನು ನಿವಾರಿಸುವ ನಿಟ್ಟಿನಲ್ಲಿ ನಗರದಲ್ಲಿ ಇದೇ ಮೊದಲ ಬಾರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಡಬಲ್ ಸ್ಟೇಜ್ ರಿವರ್ಸ್ ಆಸ್ಪೋಸಿಸ್ (ಆರ್‍ಒ) ಹಾಗೂ ಬೈಬ್ಯಾಗ್ ಎಂಬ ಅತ್ಯಾಧುನಿಕ ಸೇವೆ ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ಮೂತ್ರರೋಗಶಾಸ್ತ್ರ ತಜ್ಞ ವೈದ್ಯ ಡಾ.ವಿಪಿನ್ ಕಾವೇರಪ್ಪ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆರ್‍ಒ ವಿಧಾನ ಬಳಕೆ ಅತ್ಯಾಧುನಿಕವಾಗಿದೆ. ಡಯಾಲಿಸಿಸ್‍ಗೆ ಬಳಸುವ ನೀರಿನಲ್ಲಿ ರೋಗಾಣುಗಳು, ವಿಷಪೂರಿತ ರಾಸಾಯನಿಕ ಅಥವಾ ಲೋಹಗಳಂತಹ ಕಲ್ಮಶಗಳು ಇರದಂತೆ ನೋಡಿಕೊಳ್ಳುತ್ತಾರೆ. ಇದು ಅತಿ ಶುದ್ಧವಾದ ನೀರು ಮಾತ್ರ ಲಭ್ಯವಾಗುವಂತೆ ಮಾಡುತ್ತದೆ. ರೋಗಿಗಳ ಆರೋಗ್ಯ ಸುರಕ್ಷತೆ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಮಾತನಾಡಿ, ಉದ್ಯೋಗಿಗಳು ದಿನನಿತ್ಯದ ಕೆಲಸ ಕಾರ್ಯಕಗಳಲ್ಲಿ ತೊಡಗಬೇಕಾದ ಕಾರಣ ಸುಮಾರು ನಾಲ್ಕು ಗಂಟೆ ಹಿಡಿಯುವ ಡಯಾಲಿಸಿಸನ್ನು ತಮಗೆ ಹೊಂದಾಣಿಕೆ ಆಗುವ ಅವಧಿಯಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಕೆಲವರು ಬೆಳಗಿನ ಜಾವ ನಾಲ್ಕಕ್ಕೇ ಬಂದರೆ, ಕೆಲವರು ಕೆಲಸ ಕಾರ್ಯ ಮುಗಿದ ನಂತರ ಬರುತ್ತಿದ್ದಾರೆ. ನಿತ್ಯ ಈ ರೀತಿ ಸುಮಾರು 70 ಮಂದಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.