ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುವೆ: ಯದುವೀರ್
ಸಂಜೆವಾಣಿ ನ್ಯೂಸ್
ಮೈಸೂರು: ಮಾ.19:- ಲೋಕಸಭಾ ಚುನಾವಣಾ ಕಣ ರಂಗೇರಿದ್ದು, ಮೈಸೂರು- ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೀವು ಅರಮನೆಗೆ ಬರಬೇಕಿಲ್ಲ. ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ ಎಂದು ಕ್ಷೇತ್ರದ ಜನತೆಗೆ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಳೆದ ಒಂಭತ್ತು ವರ್ಷದಿಂದ ನಮಗೆ ಒಳ್ಳೆಯ ಸ್ವಾಗತ ಕೊರಿದ್ದೀರಾ. ಮನೆ ಮಗನಾಗಿ ಸಹೋದರನಾಗಿ ನನ್ನ ಮೇಲೆ ಪ್ರೀತಿ ತೋರಿದ್ದಿರಾ. ಇದೆ ರೀತಿಯ ಪ್ರೀತಿ ವಿಶ್ವಾಸ ಮುಂದೆಯೂ ನಿಮ್ಮಿಂದ ನನಗೆ ಬೇಕಿದೆ. ನನ್ನ ತತ್ವ ಸಿದ್ದಾಂತಗಳು ಬಿಜೆಪಿ ಪಕ್ಷಕ್ಕೆ ಹತ್ತಿರವಿದೆ. ನಮ್ಮ ಆಲೋಚನೆ ಮತ್ತೆ ಬಿಜೆಪಿ ಆಲೋಚನೆ ಒಂದೇ ತರ ಇದೆ. ಈ ಕಾರಣಕ್ಕಾಗಿ ನಾನು ಬಿಜೆಪಿಯನ್ನ ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದರು.
ನಮ್ಮ ತಂದೆ ನಾಲ್ಕು ಬಾರಿ ಸಂಸದರಾಗಿದ್ದರು. ನಮಗೆ ಎಲ್ಲ ಪಕ್ಷದವರೊಂದಿಗೆ ಸಂಬಂಧ ಇದೆ. ನನ್ನ ಪರಿಕಲ್ಪನೆಗೆ ಬಿಜೆಪಿಯೊಂದಿಗೆ ಹೊಂದಾಣಿಕೆ ಇದೆ. ಜನರಿಗೆ ಅರಮನೆ ಬಗ್ಗೆ ಭಾವನಾತ್ಮಕ ಸಂಬಂಧ ಇದೆ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನರು. ನಾನು ಸಾಮಾನ್ಯ ಎಂಪಿ ರೀತಿ ಕೆಲಸ ಮಾಡುತ್ತೇನೆ. ಆಧುನಿಕ ತಂತ್ರಜ್ಞಾನದ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದು. ನೀವು ಅರಮನೆಗೆ ಬರಬೇಕಿಲ್ಲ, ನಾನೇ ಅರಮನೆಯಿಂದ ಹೊರಗೆ ಬರುತ್ತೇನೆ. ತುಂಬಾ ದೊಡ್ಡ ನಿರೀಕ್ಷೆ ಇದೆ ಅಂತ ಅನ್ನಿಸುತ್ತಿಲ್ಲ. ನಾನು ರಾಜ ಅಂತ ಹೇಳಿಲ್ಲ. ಅರಮನೆಗೆ ಒಂದು ಪರಂಪರೆ ಇದೆ. ಅದನ್ನು ಹೊರತುಪಡಿಸಿ ನಾನು ಸಾಮಾನ್ಯನಾಗಿ ಇರುತ್ತೇನೆ. ನನ್ನನ್ನು ಸಂಸದ, ಪ್ರತಿನಿಧಿ ಏನು ಬೇಕಾದರೂ ಕರೆಯಿರಿ. ಇನ್ನು ಬೆಂಗಳೂರು ಅರಮನೆ ವಿಚಾರ ಕಾನೂನಾತ್ಮಕವಾಗಿ ನಡೆಯುತ್ತೆ ಎಂದು ತಿಳಿಸಿದರು.
ನನ್ನ ತಾಯಿ ನನ್ನ ಪರವಾಗಿ ಪ್ರಚಾರಕ್ಕೆ ಬರುವ ಅಗತ್ಯ ಇಲ್ಲ. ತಾಯಿ ಆಶೀರ್ವಾದದಿಂದಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರು ನನ್ನ ಪರವಾಗಿ ಹೇಳಿಕೆ ಕೊಡಬೇಕೆಂಬುದು ಏನು ಇಲ್ಲ. ಅವರ ಸಹಕಾರ ನನ್ನ ಮೇಲೆ ಸದಾ ಇರುತ್ತಹೇಳಿದರು ಹೇಳಿದರು.
ನಾನು ಪಕ್ಷಕ್ಕಾಗಲಿ, ಯಧುವೀರ್ ಗೆ ಆಗಲಿ ದ್ರೋಹ ಮಾಡಲ್ಲ:
ಪಕ್ಷವು ಯದುವೀರ್ ಅವರನ್ನು ಮೈಸೂರು-ಕೊಡಗು ಅಭ್ಯರ್ಥಿಯಾಗಿ ಮಾಡಿದೆ. ನಾನು ಪಕ್ಷಕ್ಕೂ, ಯದುವೀರ್ ಅವರಿಗೂ ದ್ರೋಹ ಮಾಡಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಬಿಜೆಪಿ ಸಂವಾದದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾವು ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಯದುವೀರ್ ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕು. ಇದು ತುಂಬಾ ದೊಡ್ಡ ಕ್ಷೇತ್ರ. ಕಡಕೊಳದಿಂದ ಕರ್ಕಿ 200 ಕಿ.ಮೀ. ಹೋಗಬೇಕು. ಜನರನ್ನು ತಲುಪಲು ಮಾಧ್ಯಮ ಮಾಖ್ಯ ಎಂದರು.
ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ ದ್ರೋಹ ಮಾಡಲ್ಲ. 2014 ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂತಾ ಹೈಕಮಾಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರಿ ಅಂತಾ ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ಟಿಕೆಟ್ ತಪ್ಪಿಸಿದ್ದೀರಿ ಅಂತಾ ನಾನು ಕೇಳಿಯೂ ಇಲ್ಲ. ಅವರು ಹೇಳಿಯೂ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಆಫರ್ ಇತ್ತು ಇಲ್ವಾ ಎಂಬ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು ಇದಷ್ಟೇ ನಮಗೆ ಮುಖ್ಯ. ಪಕ್ಷ ನನಗೆ ತಾಯಿ ಇದ್ದಾಗೆ. ಇದು ಬರಿ ಬಾಯಿ ಮಾತಲ್ಲ. ಇದು ನನ್ನ ಮನಸಿನ ಮಾತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಸಚಿವ ಎಸ್ ಎ ರಾಮದಾಸ್, ರಾಜ್ಯ ಕಾರ್ಯದರ್ಶಿ ಅಂಬಿಕಾ ಹುಲಿ ನಾಯ್ಕರ್, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಇದ್ದರು.