ಚಾ.ನಗರದ ಕೇಂದ್ರ ಸ್ಥಾನದಲ್ಲಿನ ನೀರಿನ ಬವಣೆ ನೀಗಿಸುವಲ್ಲಿ ವೈಫಲ್ಯ..!
ಸಂಜೆವಾಣಿ ವಾರ್ತೆ
ಹನೂರು: ಮಾ.19:- ಚಾಮರಾಜನಗರದ ಕೇಂದ್ರ ಸ್ಥಾನದಲ್ಲೇ ತಾಂಡವವಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವಲ್ಲಿ ನಿಸ್ಸೀಮ ನಿರ್ಲಕ್ಷ್ಯ ತಾಳಿರುವ ಜಿಲ್ಲಾಡಳಿತ ಬರ ನಿರ್ವಹಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತದ ನೀರಿನ ಬವಣೆ ನೀಗಿಸಲು ಪಣ ತೊಟ್ಟಿದ್ದು ಯಾವ ಪರಿಯಲ್ಲಿ ಯಶ ಸಾಧಿಸುವುದೋ ಎಂದು ಪ್ರಬುದ್ದ ನಾಗರೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಬೇಸಿಗೆಯ ಬೇನೆಯಿಂದ ಇಡೀ ರಾಜ್ಯವೇ ತತ್ತರಿಸುತ್ತಿರುವ ಈ ಸಮಯದಲ್ಲಿ ಗಡಿನಾಡು ಚಾಮರಾಜನಗರದಲ್ಲಿ ಅತಿ ಹೆಚ್ಚು ಬಿಸಿಲಿನ ಝಳದಿಂದ ಜನತೆ ಬಸವಳಿದಿದೆ. ಕುಡಿಯುವ ಹಾಗೂ ಬಳಕೆಯ ನೀರಿಗಾಗಿ ಜಿಲ್ಲಾ ಕೇಂದ್ರದ ನಗರಸಭಾ ವ್ಯಾಪ್ತಿಯಲ್ಲಿಯೇ ನಾಗರೀಕರು ಪರಿತಪಿಸುತ್ತಿದ್ದು ಜೀವಜಲಕ್ಕಾಗಿ ಇಡೀ ಪಟ್ಟಣವು ಹಾತೊರೆಯುತ್ತಿದೆ.
ನಗರದ ಬಹು ಮುಖ್ಯ ಜೀವಜಲಾಧಾರ ಕನ್ನಡ ನಾಡಿನ ಜೀವನದಿ ಕಾವೇರಿ ಟಿ.ನರಸೀಪುರದಿಂದ ಸರಬರಾಜುಗುತ್ತಿರುವ ಪ್ರಸ್ತುತ ಜಲಮೂಲ ಚಾಮರಾಜನಗರಕ್ಕೆ ವರದಾನವೇ ಸರಿ. ನೀರು ಸರಬರಾಜು ವಿಷಯಕ್ಕೆ ಬಂದರೆ ಟಿ.ನರಸೀಪುರದ ನೀರು ಸರಬರಾಜಿನ ಮೇಲೆ ಇಡೀ ಪಟ್ಟಣವೆ ಅವಲಂಬಿತವಾಗಿದೆ.
ಕೆಲವು ವಾರ್ಡ್ ಗಳಿಗೆ ದಿನನಿತ್ಯ ನೀರು ಸರಬರಾಜು ಮಾಡಿದರೆ. ಹತ್ತು ಹಲವು ವಾರ್ಡ್ ಗಳಿಗೆ ವಾರಕ್ಕೊಮ್ಮೆ ಅಥವಾ ಹತ್ತು ದಿನಗಳಿಗೊಮ್ಮೆ ನೀರು ಸರಬರಾಜು ಸೌಭಾಗ್ಯ ದೊರೆಯುತ್ತಿದೆ.
ಇದರರ್ಥ ನೀರು ಸರಬರಾಜಿನಲ್ಲಿ ತೀರಾ ವ್ಯತ್ಯಯ ಉಂಟಾಗುತ್ತಿದ್ದರೂ ಸಹ ಮೌನವಾಗಿ ಕುಳಿತಿರುವ ಆಡಳಿತಯಂತ್ರದ ನಿರ್ಲಕ್ಷ್ಯ ಧೋರಣೆಯಿಂದಾಗಿ ಟಿ.ನರಸೀಪುರ ಹಾಗು ಮಂಗಲದ ಶುದ್ದೀಕರಣ ಘಟಕಗಳಲ್ಲಿನ ಯಂತ್ರೋಪಕರಣಗಳು ಪದೇಪದೇ ರಿಪೇರಿ ಆಗುತ್ತಿರುವುದೇ ಇದಕ್ಕೆ ಸ್ಪಷ್ಟ ಉದಾಹರಣೆ. ಸಮರ್ಪಕ ನಿರ್ವಹಣೆ ಇಲ್ಲದೆ, ಸೂಕ್ತ ತಂತ್ರಜ್ಞರು ಇಲ್ಲದೆ ಮತ್ತು ಯಾವುದೇ ಪರ್ಯಾಯ ಯಂತ್ರಗಳನ್ನು ಬಳಕೆಗೆ ಖರೀದಿಸಲು ಹಿಂದೇಟು ಹಾಕಿ ರಿಪೇರಿ ಮಾಡಲು ವಿಳಂಬಧೋರಣೆ ಅನುಸರಿಸಿ ಕಾಲಹರಣ ಮಾಡುತ್ತ ರಿಪೇರಿ ಹಣದಲ್ಲೆ ಕಮೀಷನ್ ಕಮಾಯಿಸುವ ಕಮಾಲ್ ನಡೆಸುತ್ತಿರುವ ನಗರಸಭೆಯ ಆಡಳಿತದ ಕರಾಮತ್ತಿನಿಂದಾಗಿ ಚಾಮರಾಜನಗರದ ಪಟ್ಟಣದ ಜನತೆಯ ನೀರಿನ ಬವಣೆ ಹಾಗು ದಾಹವನ್ನು ತೀರಬಲ್ಲುದೆ…? ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಅತಿ ಹೆಚ್ಚಿನ ಪ್ರಮಾಣದ ಉಷ್ಣತೆಯಿಂದ ನದಿಯ ನೀರಿನ ಪಾತ್ರದಲ್ಲಿ ನೀರು ಬರಿದಾಗುತ್ತಿದ್ದು ಒಂದೊಮ್ಮೆ ಟಿ.ನರಸೀಪುರದ ನೀರು ಸರಬರಾಜು ಸ್ಥಗಿತಗೊಂಡರೆ ಚಾಮರಾಜನಗರದ ಪಟ್ಟಣದ ಜನತೆಯನ್ನು ಸಾಕ್ಷಾತ್ ಭಗವಂತನೇ ಕಾಪಾಡಬೇಕು…!
ಇದಲ್ಲದೆ ಹಿಂದೆಂದಿಗಿಂತಲೂ ಸಹ ಕಾಣದ ಬಿಸಿಲಿನ ತಾಪಕ್ಕೆ ಬಸವಳಿದಿರುವ ಪಟ್ಟಣಕ್ಕೆ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಇಂದಿಗೂ ಸಹ ತಲೆಕೆಡಿಸಿಕೊಂಡಿಲ್ಲ. ಹಲವು ವಾರ್ಡ್ ಗಳಲ್ಲಿ ಬೋರ್ ಗಳು ಮತ್ತು ನೀರು ಶುದ್ಧೀಕರಣ ಘಟಕಗಳು ಕೆಟ್ಟು ನಿಂತಿದ್ದರು ಸಹ ರೀಪೇರಿಗೆ ಒತ್ತು ನೀಡದೆ ದಿವ್ಯ ನಿರ್ಲಕ್ಷ ತೋರಿರುವುದು ವಿಪರ್ಯಾಸವೆ ಸರಿ.
ನಗರಸಭೆಯೇ ಅಧಿಕೃತವಾಗಿ ಕೆಟ್ಟು ನಿಂತಿರುವ 10 ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ಥಿಗಾಗಿ ಮಾ. 14 ರಂದು ಟೆಂಡರ್ ಕರೆದಿರುವುದೇ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಒಮ್ಮೆಲೆ ಅಷ್ಟು ಶುದ್ದೀಕರಣ ಘಟಕಗಳು ಕೆಟ್ಟು ನಿಲ್ಲುವ ತನಕ ಸಂಬಂಧಿಸಿದ ವಿಭಾಗದವರೇನು ಕತ್ತೆ ಕಾಯುತ್ತಿದ್ದರಾ..? ಎಂಬುದು ನಾಗರೀಕರ ಆಕ್ರೋಶಭರಿತ ನುಡಿ.
ಬರ ನಿರ್ವಹಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತದ ಪ್ರಕೃತಿ ವಿಕೋಪ ಕೆಲಸ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸಬೇಕಾಗಿರುವ ಹಿನ್ನೆಲೆಯಲ್ಲಿ ಗ್ರಾಮಾಂತರ ಹಾಗೂ ನಗರ, ಪಟ್ಟಣಗಳ ಯಾವುದೇ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಚಾಮರಾಜನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು, ಸಂಪರ್ಕಿಸುವಂತೆ ಪ್ರಕಟಣೆ ಹೊರಡಿಸಿ ಅದಕ್ಕೆಂದೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ಒಂದು ವಾಟ್ಸಾಪ್ ಸಂಪರ್ಕ, ಮೂರು ದೂರವಾಣಿಗಳು, ಒಂದು ಟ್ರೋಲ್ ಪ್ರೀ ದೂರವಾಣಿ ಸಂಪರ್ಕ ಕಲ್ಪಿಸಿರುವ ಜಿಲ್ಲಾಡಳಿತ ಜಿಲ್ಲಾ ಕೇಂದ್ರದ ಕೇಂದ್ರ ಸ್ಥಾನದಲ್ಲಿ ತಮ್ಮ ಮೂಗಿ ನಡಿಯಲ್ಲೇ ನಲುಗುತ್ತಿರುವ ನೀರಿನ ಬವಣೆಯನ್ನು ನೀಗಿಸಲಾರದ ಜಿಲ್ಲಾಡಳಿತದ ಮುಖ್ಯ ಅಧಿಕಾರಿಯಾದ ಜಿಲ್ಲಾಧಿಕಾರಿ/ ಆಡಳಿತಾಧಿಕಾರಿಗಳೂ ಆದ ಶಿಲ್ಪಾನಾಗ್ ರವರು ಇನ್ನೂ ಜಿಲ್ಲೆಯಾದ್ಯಂತದ ನೀರಿನ ಭವಣೆಯನ್ನು ನೀಗಿಸಲು ಮುಂದಾಗುವರೆ ಕಾದು ನೋಡೋಣ..!