ಕನ್ನಡ ಕಟ್ಟುವ ಕೆಲಸಕ್ಕೆ ಬೇಧ ಭಾವ ಇರಬಾರದು
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.19: ಕನ್ನಡವನ್ನು ಕಟ್ಟುವ ಕೆಲಸಕ್ಕೆ ಭಾಷೆ, ಗಡಿ, ದೇಶ ಎಂಬ ಯಾವುದೆ ಬೇಧಭಾವ ಇರಬಾರದು ಕುವೆಂಪು ಅವರ ಚಿಂತನೆಯನ್ನು ಸದಾ ಮನಸ್ಸಿನಲ್ಲಿ ನಾಟಿಸಿಕೊಳ್ಳಬೇಕು. ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಧ್ಯೇಯವನ್ನು ಇಟ್ಟುಕೊಳ್ಳಬೇಕು ಎಂದು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪೆÇ್ರ.ಹೆಚ್.ಎಂ.ಹೇಮಲತಾ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗವು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಸ್ಕೃತಿಯ ಅಧ್ಯಯನ ಬಹುಶಿಸ್ತೀಯ ನೆಲೆಗಳು ಎಂಬ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಕನ್ನಡ ಭಾಷಾ ಪ್ರೇಮವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಕಲಿಯಲು ಸಾಗರದಷ್ಟು ವಿಷಯಗಳಿವೆ. ಅದರಲ್ಲಿ ಕನ್ನಡವನ್ನು ಹೆಚ್ಚು ಪ್ರೀತಿಸಬೇಕು. ಇತ್ತೀಚಿನ ಯುವಕರಲ್ಲಿ ಮಾತೃಭಾಷಾ ಪ್ರೇಮವು ಕಡಿಮೆಯಾಗುತ್ತಿದೆ. ಇತರೆ ಭಾಷೆಗಳ ಮೇಲೆ ಒಲವು ಬೆಳೆಸಿಕೊಳ್ಳುತ್ತಿದ್ದಾರೆ. ಇದು ತಪ್ಪಲ್ಲ. ಆದರೆ ನಮ್ಮ ಮಾತೃಭಾಷೆಯ ಬೆಳವಣಿಗೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು. ಕಾಲೇಜಿನ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕನ್ನಡವನ್ನು ಕಲಿಸಲೇಬೇಕು ಎಂಬ ಸಂಕಲ್ಪವನ್ನು ಸರಕಾರ ಮಾಡುತ್ತಿದೆ. ಹಾಗಾಗಿ ಕನ್ನಡ ವಿಷಯದ ಬಗೆಗೆ ಹಲವಾರು ಮುಕ್ತ ಅವಕಾಶಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಭಾಷಾ ಪ್ರೇಮಿಗಳಾಗಿ ಹೊರಹೊಮ್ಮಬೇಕು ಎಂದು ಹೇಮಲತಾ ಕಿವಿಮಾತು ಹೇಳಿದರು.
ವಿಚಾರ ಸಂಕಿರಣದಲ್ಲಿ ಪ್ರಧಾನ ಉಪನ್ಯಾಸವನ್ನು ನೀಡಿದ ರಾಮನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಹೆಚ್.ಡಿ.ಉಮಾಶಂಕರ್ ಭಾಷಾ ಸಂಸ್ಕೃತಿಯ ಉನ್ನತಿಗೆ ಕನ್ನಡವು ತನ್ನದೆ ಆದ ಕಾಣಿಕೆಯನ್ನು ನೀಡಿದೆ. ಯಾವುದೆ ಒಂದು ಭಾಷೆಯ ಬೆಳವಣಿಗೆಯು ತನ್ನ ಮೂಲ ಸಂಸ್ಕೃತಿಯನ್ನು ಒಳಗೊಂಡಂತೆ ಬೆಳೆಯಬೇಕು. ಮೂಲ ಸಂಸ್ಕೃತಿಗೆ ಧಕ್ಕೆಯಾದರೆ ಭಾಷೆಯ ಬೆಳವಣಿಗೆಯು ಕುಂಠಿತವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾಷೆಯ ಬೆಳವಣಿಗೆಯ ಹೆಸರಿನಲ್ಲಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ತರುವಂತಹ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿವೆ. ಇದರ ಬಗೆಗೆ ಯುವ ಸಮೂಹ ಎಚ್ಚೆತ್ತುಕೊಳ್ಳಬೇಕು. ಕ್ನನಡ ಭಾಷೆಯ ಅಂದ ಇರುವುದೆ ತನ್ನ ಮೂಲ ಸಂಸ್ಕೃತಿಯಲ್ಲಿ ಎಂಬ ಸತ್ಯವನ್ನು ಅರಿಯಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಯಕೀರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯೂಎಸಿ ಸಂಚಲಕರಾದ ಡಾ.ರಾಜೀವ್ ಹಾಗೂ ಪತ್ರಾಂಕಿತ ವ್ಯವಸ್ಥಾಪಕ ಬಿ.ಎ.ಮಂಜುನಾಥ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಪ್ರಾದ್ಯಾಪಕರುಗಳಾದ ರುಪಾ, ಡಿ.ಎಸ್.ಸರಸ್ವತಿ, ಮುನಿಕೃಷ್ಣ, ಕುಮಾರಸ್ವಾಮಿ ಇದ್ದರು.
ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಡಾ.ಹೆಚ್.ಡಿ.ಉಮಾಶಂಕರ್ ಅವರನ್ನು ಕಾಲೇಜಿನ ವತಿಯಿಂದ ಅಭಿನಂದಿಸಲಾಯಿತು.