ಕೆರೆಕಟ್ಟೆಗಳು ಒಣಗುತ್ತಿವೆ ನೀರು ತುಂಬಿಸುವ ಕೆಲಸ ಮಾಡಿ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.19: ಈಗಾಗಲೇ ಕೆರೆಕಟ್ಟೆಗಳು ನೀರಿಲ್ಲದೆ ಒಣಗುತ್ತಿವೆ ಜನಜಾನುವಾರುಗಳಿಗೆ, ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ ಹೀಗಿರುವಾಗ ಹಾಸನ ಜಿಲ್ಲೆಯ ಗೊರೂರು ಅಣೆಕಟ್ಟಿಯಿಂದ ನೀರನ್ನು ಹಾಸನ ಮತ್ತು ಮಂಡ್ಯ ಜಿಲ್ಲೆಗಳಿಗೆ ಹರಿಸದೇ ತುಮಕೂರು ಜಿಲ್ಲೆಗೆ ಹರಿಸುತ್ತಿರುವ ಕ್ರಮವನ್ನು ತಾಲ್ಲೂಕು ರೈತಸಂಘ ಹಾಗು ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಾತನಾಡಿದ ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿಪುಟ್ಟೇಗೌಡ ಜಿಲ್ಲೆ ತೀವ್ರವಾದ ಬರಗಾಲವನ್ನು ಎದುರಿಸುತ್ತಿದೆ. ಮಂಡ್ಯ ಮತ್ತು ಹಾಸನ ಜಿಲ್ಲೆಯ ರೈತರುಗಳು ತುಮಕೂರಿಗೆ ಹರಿಯುತ್ತಿರುವ ನೀರನ್ನು ನೋಡಿ ತಲೆಯ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುಮಕೂರು ರಾಜಕಾರಣ ಗಟ್ಟಿಯಾಗಿದ್ದು ಅಲ್ಲಿನ ರೈತರನ್ನು ಉಳಿಸುವ ಕೆಲಸವನ್ನು ಆ ಜಿಲ್ಲೆಯ ಸಚಿವರು ಮಾಡುತ್ತಿದ್ದು ಇದಕ್ಕಾಗಿ ಮಂಡ್ಯ ಜಿಲ್ಲೆಯ ಜನರನ್ನು ಬಲಿಕೊಡಲಾಗುತ್ತಿದೆ. ಮಂಡ್ಯ ಜಿಲ್ಲೆಯ ಬಹುತೇಕ ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳೆಂದು ಸರ್ಕಾರ ಘೋಷಿಸಿದ್ದರೂ ಈ ತಾಲ್ಲೂಕುಗಳಿಗೆ ಗೊರೂರು ಜಲಾಶಯದಲ್ಲಿರುವ ನೀರನ್ನು ಹರಿಸುವ ಕೆಲಸ ಮಾಡಲಾಗುತ್ತಿಲ್ಲ. ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರು ತಮ್ಮ ಪ್ರಭಾವ ಬಳಸಿ ತಮ್ಮ ಸ್ವಂತ ಜಿಲ್ಲೆಗೆ ನೀರನ್ನು ತೆಗೆದುಕೊಂಡು ಹೋಗುತ್ತಿದ್ದರೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಚಕಾರ ಎತ್ತದಿರುವುದು ಮಂಡ್ಯ ಜಿಲ್ಲೆಯ ರೈತರ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ. ತಾಲ್ಲೂಕಿನ ಬಹುತೇಕ ಎಲ್ಲಾ ಕೆರೆಕಟ್ಟೆಗಳಲ್ಲಿಯೂ ನೀರು ಖಾಲಿಯಾಗಿದ್ದು ಜನಜಾನುವಾರುಗಳಿಗೆ ಕುಡಿಯಲು ನೀರಿಲ್ಲದಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಪ್ರದೇಶದ ರೈತರ ಕೊಳವೆ ಬಾವಿಗಳಿಗೆ ಅಂತರ್ಜಲದ ಪ್ರಮಾಣ ಕಡಿಮೆಯಾಗಿ ಸಾವಿರಾರು ಕೊಳವೆಬಾವಿಗಳು ನಿಂತುಹೋಗಿವೆ. ಬೆಳೆಗಳು ಒಣಗುತ್ತಿದೆ, ಸಾಲಸೋಲ ಮಾಡಿ ಬೆಳೆ ಮಾಡಿದ ರೈತನ ಕಷ್ಟವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ. ಸಮಾರಂಭಗಳಲ್ಲಿ ಉದ್ದುದ್ದ ಭಾಷಣ ಮಾಡುವ ರಾಜಕಾರಣಿಗಳು ಒಮ್ಮೆ ಹಳ್ಳಿಗಳ ರೈತರ ಪರಿಸ್ಥಿತಿಯನ್ನು ಅವಲೋಕನ ಮಾಡಿ ವಾಸ್ಥವಾಂಶವನ್ನು ತಿಳಿದುಕೊಳ್ಳಬೇಕು. ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಲೋಕಸಭಾ ಚುನಾವಣೆಗಳ ಗುಂಗಿನಲ್ಲಿಯೇ ಕಾಲ ಕಳೆಯುತ್ತಿದ್ದು ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ತುಮಕೂರಿಗೆ ಬೆಣ್ಣೆ, ಮಂಡ್ಯ ಮತ್ತು ಹಾಸನಕ್ಕೆ ಸುಣ್ಣ ಹಾಕಲು ಹೊರಟಿರುವ ಸರ್ಕಾರದ ಕ್ರಮ ಖಂಡನೀಯವಾದುದು. ಇದು ಹೀಗೆಯೇ ಮುಂದುವರೆದರೆ ಲೋಕಸಭಾ ಚುನಾವಣೆಯಲ್ಲಿ ಮತ ಕೇಳಲು ಹಳ್ಳಿಗಳಿಗೆ ತೆರಳುವ ಸಂದರ್ಭದಲ್ಲಿ ರೈತರು ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ನಾಗರೀಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬೊಪ್ಪನಹಳ್ಳಿ ಬಸವೇಗೌಡ ಮಾತನಾಡಿ ಬರಗಾಲದ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಕೂಡಲೇ ತಮ್ಮ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಇಲ್ಲಿನ ರೈತರ ಬದುಕು ಬೀದಿಗೆ ಬೀಳದಂತೆ ನೋಡಿಕೊಳ್ಳಬೇಕು. ಶಾಸಕ ಹೆಚ್.ಟಿ.ಮಂಜು ತಾಲೂಕಿನ ರೈತರ ಹಿತ ಕಾಯುವ ಕೆಲಸ ಮಾಡಬೇಕಿದೆ.ಇತ್ತೀಚೆಗೆ ಕಟ್ಟಹಳ್ಳಿ ಏತನೀರಾವರಿ ಲೋಕಾರ್ಪಣೆಗೊಂಡು ಕೆಲವು ದಿನಗಳ ಕಾಲ ನೀರು ಹರಿಸಲಾಯಿತು ಆದರೆ ನದಿಯಲ್ಲಿ ನೀರಲ್ಲದ ಕಾರಣ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದು ರೈತರಲ್ಲಿ ಆತಂಕ ಮೂಡಿಸಿದೆ.ಶಾಸಕರು ನಮ್ಮ ತಾಲ್ಲೂಕಿನ ಕೆರೆಕಟ್ಟೆಗಳನ್ನು ತುಂಬಿಸಲು ಹೇಮಾವತಿ ನದಿಗೆ ನೀರನ್ನು ಬಿಡಿಸುವ ಕೆಲಸಕ್ಕೆ ಮುಂದಾಗಬೇಕು, ಹೇಮಾವತಿ ನದಿಯ ಮೂಲಕ ಕೆಲ ದಿನಗಳು ನೀರು ಹರಿಸಿದರೆ ಕಟ್ಟಹಳ್ಳಿ ಏತ ನೀರಾವರಿಯ ಮೂಲಕ ಕೆರೆಕಟ್ಟೆಗಳನ್ನು ತುಂಬಿಸಬಹುದಾಗಿದ್ದು ನಿಮ್ಮ ಜೊತೆ ತಾಲ್ಲೂಕಿನ ರೈತ ಸಮೂಹವಿದೆ. ಕೂಡಲೇ ರೈತರೊಂದಿಗೆ ಬೀದಿಗಿಳಿದು ನೀರಿಗಾಗಿ ಹೋರಾಟ ಮಾಡಲು ಶಾಸಕ ಹೆಚ್.ಟಿ.ಮಂಜು ಸಿದ್ದರಾಗಬೇಕು ಎಂದು ಬಸವೇಗೌಡ ಒತ್ತಾಯ ಮಾಡಿದ್ದಾರೆ.