ಅಬ್ ಕೆ ಬಾರ್ ಚಾರಸೋ ಸೀಟ್ ಪಾರ್ ಅಲ್ಲ, ಅಬ್ ಕೆ ಬಾರ್ ತಡಿಪಾರ್ ಮೋದಿ ಸರ್ಕಾರ್: ಮರಿಯಂ ಧಾವಳೆ
ಕಲಬುರಗಿ:ಮಾ.18: ಅಬ್ ಕೆ ಬಾರ್ ಚಾರಸೋ ಸೀಟ್ ಪಾರ್ ಅಲ್ಲ, ಅಬ್ ಕೆ ಬಾರ್ ತಡಿಪಾರ್ ಮೋದಿ ಸರಕಾರವನ್ನು ಮಹಿಳೆಯರು ಸೋಲಿಸದಿದ್ದರೆ ನಮಗೆ ಉಳಿಗಾಲ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ದೆಹಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮರಿಯಂ ಧಾವಳೆ ಅವರು ಎಚ್ಚರಿಸಿದರು.
ಜನವಾದಿ ಮಹಿಳಾ ಸಂಘಟನೆ, ಎಸ್‍ಎಫ್‍ಐ, ಡಿವಾಯ್‍ಎಫ್‍ಆಯ್, ಪ್ರಾಂತ ರೈತ ಸಂಘ, ಕೃಷಿ ಕೂಲಿಕಾರರ ಸಂಘ, ಸಿಆಯ್‍ಟಿಯು, ದೇವದಾಸಿ ನಿರ್ಮೂಲನಾ ಸಮಿತಿ ಮುಂತಾದ ಸಂಘಟನೆಗಳು ಸೇರಿ ಅಪ್ಪಾ ಸೆಂಟನರಿ ಸಭಾ ಮಂಟಪದಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ಸರ್ಕಾರ ಮಹಿಳೆಯರ ಸ್ಥಿತಿಯನ್ನು ದಿನದಿಂದ ದಿನಕ್ಕೆ ಶೋಚನೀಯಗೊಳಿಸುತ್ತಿದೆ. ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಲಂಗು ಲಗಾಮವಿಲ್ಲದೆ ಹೆಚ್ಚುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಸರ್ಕಾರ ರೇಪಿಸ್ಟ್‍ರನ್ನು ರಕ್ಷಿಸಿಕೊಳ್ಳುತ್ತಿದೆ. ಮತ್ತು ಸಮರ್ಥಿಸಿಕೊಳ್ಳುತ್ತಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ಖೇದ ವ್ಯಕ್ತಪಡಿಸಿದ ಅವರು, ಬರುವ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು ಎಂದು ಕರೆ ನೀಡಿದರು.
ಅತಿಥಿಗಳಾದ ಡಾ ಇಂದುಮತಿ ಪಾಟೀಲ್ ಅವರು ಮಾತನಾಡಿಮ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ. ಮನೆ, ನೌಕರಿ, ಸಮಾಜ, ಸಂಘಟನೆ ಎಲ್ಲವನ್ನು ನಿಭಾಯಿಸಿ ಸೈ ಎನಿಸಿಕೊಂಡಿದ್ದೇವೆ. ಮುಂದೆಯೂ ದೇಶವನ್ನು ಸರಿಯಾದ ದಿಕ್ಕಿನಲ್ಲಿ ನಡೆಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಮುಖ್ಯ ಭಾಷಣಕಾರರಾದ ಸಿಐಟಿಯನ ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಅವರು ಮಾತನಾಡಿ, ಗೆಳತಿಯರೆ ನಾವು ಮಹಿಳೆಯರು ಯಾವತ್ತೂ ಸೇವೆ ಮಾಡಲು ಹುಟ್ಟಿದವರು ಎಂದು ಮನುವಾದ ಹೇಳುತ್ತದೆ. ಅದನ್ನೆ ಮೋದಿ ಸರ್ಕಾರ ಖಾಯಂಗೊಳಿಸಲು ಹೊರಟಿದೆ. ಸಮಾಜದಲ್ಲಿ ಜಡ್ಡುಗಟ್ಡಿರುವ ಈ ಮಹಿಳಾ ವಿರೋಧಿ ನಂಬಿಕೆಯನ್ನು ಕಿತ್ತೆಸೆಯಬೇಕು. ಅಂದಾಗಲೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ. ನೀಲಾ ಅವರು ಮಾತನಾಡಿ, ಮಹಿಳಾ ದಿನಾಚರಣೆ ಎಂದರೆ ಸಂಪ್ರದಾಯವಲ್ಲ. ಗತಾನುಗತಿಕ ಆಚರಣೆಯಲ್ಲ. ಸಮರಧೀರ ಹೋರಾಟ ಮಾಡಿ ಎಂಟು ತಾಸು ಮಾತ್ರ ದುಡಿಮೆ. ಮತದಾನದ ಹಕ್ಕು, ಹೆರಿಗೆ ರಜೆ,ಭತ್ಯೆ ಇತ್ಯಾದಿಗಳನ್ನು ಪಡೆದ ದಿನವಾಗಿದೆ. ಲಿಂಗ ಸಮಾನತೆ ನೆಲೆಸುವವರೆಗೆ ನಮ್ಮ ಹೋರಾಟ ನಿಲ್ಲದು ಎಂದರು.
ಮೋದಿ ಸರ್ಕಾರ ಮಹಿಳೆಯರನ್ನು ಧರ್ಮ, ಜಾತಿ, ದೇವರು ದಿಂಡರ ಹೆಸರಿನಲ್ಲಿ ಒಡೆಯುತ್ತಿದೆ. ಆದರೆ ನಾವು ಭಾರತೀಯರನ್ನು ಛಿದ್ರವಾಗಲು ಬಿಡುವುದಿಲ್ಲ. ಕೋಮುವಾದಿ ಸರ್ಕಾರ ಕಿತ್ತೆಸೆಯುವ ಸಂಕಲ್ಪ ಮಾಡುವುದರ ಮೂಲಕ ಈ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸೋಣ ಎಂದು ಕರೆಕೊಟ್ಟರು.
ಡಾ ಮೀನಾಕ್ಷಿ ಬಾಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಸದಳ ಸಂಕಟಗಳ ಮಧ್ಯೆಯು ಮಹಿಳಾ ಧೀಶಕ್ತಿ ಪುಟಿದೇಳುತ್ತದೆ. ಇಂದು ಸಂತ ಶರಣ ಸೂಫಿಗಳ ನಾಡು. 12ನೇ ಶತಮಾನದ ಶರಣೆ ನೀಲಾಂಬಿಕೆ ಹೇಳಿದಂತೆ ನಾವು ಹೇಡಿಗಳಲ್ಲ, ಹರುಷದ ಧೈರ್ಯಯುಳ್ಳ ಹೆಣ್ಣು ನಾವು ಎಂದರು. ಪ್ರಾರಂಭದಲ್ಲಿ ಅಂಗನವಾಡಿ ಮುಖಂಡರಾದ ಶಾಂತಾ ಘಂಟೆ ಅವರು ಸ್ವಾಗತಿಸಿದರು. ಮಲ್ಲಮ್ಮ ಕೋಡ್ಲೆ ಅವರು ವಂದಿಸಿದರು.
ವೇದಿಕೆಯ ಮೇಲೆ ಮುಖಂಡರುಗಳಾದ ಚಂದಮ್ಮ ಗೋಳಾ, ಪದ್ಮಿನಿ ಕಿರಣಗಿ, ಗೌರಮ್ಮ ಪಾಟೀಲ್, ರಾಜಮತಿ ಇಕ್ಕಳಕಿ, ನಂದಾ ಮಂಗೋಂಡಿ, ಚಂದ್ರಕಲಾ ಸರಸಂಬಾ, ಎಂ.ಬಿ. ಸಜ್ಜನ್, ವಿಜಯಲಕ್ಷ್ಮೀ ಹಿರೇಮಠ್, ಶರಣಬಸಪ್ಪ ಮಮಶೆಟ್ಟಿ, ಡಾ. ಸಾಯಬಣ್ಣಾ ಗುಡುಬಾ, ಭೀಮಶೆಟ್ಟಿ ಯಂಪಳ್ಳಿ, ಸುಧಾಮ್ ಧನ್ನಿ, ಪಾಂಡುರಂಗ್ ಮಾವಿನಕರ್, ಸುಜಾತಾ ಕುಸನೂರ್ ಮುಂತಾದವರು ಉಪಸ್ಥಿತರಿದ್ದರು. ಲವಿತ್ರ ವಸ್ತ್ರದ್ ಅವರು ಕಾರ್ಯಕ್ರಮ ನಿರೂಪಿಸಿದರು.