ಖರ್ಗೆ ಕುಟುಂಬದ ಕುರಿತು ಮೋದಿ ಮಾತನಾಡುವ ನೈತಿಕತೆ ಇಲ್ಲ:ಭದ್ರೆ
ಕಲಬುರಗಿ:ಮಾ.18: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುವುದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ಕುರಿತು ಮಾತನಾಡಬೇಕು ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರು ತಂದೆಯ ಪ್ರಕರಣದ ಕುರಿತು ಮಾತನಾಡುವುದನ್ನು ಬಿಟ್ಟು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಟೀಕೆ ಮಾಡುತ್ತಿದ್ದಾರೆ. ಒಬ್ಬ ಅಸ್ಪøಶ್ಯ ಸಮುದಾಯದವರೊಬ್ಬರು ಎಐಸಿಸಿ ಅಧ್ಯಕ್ಷರಾಗಿರುವುದು ಸಹಿಸಿಸಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಖರ್ಗೆ ಅವರ ಕುಟುಂಬದ ಕುರಿತು ಹಗುರವಾಗಿ ಮಾತನಾಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿಯು ಕೇವಲ ದಲಿತ ವಿರೋಧಿಯಷ್ಟೇ ಅಲ್ಲ, ಹಿಂದುಳಿದ ವರ್ಗಗಳ ವಿರೋಧಿ ನೀತಿಯನ್ನೂ ಸಹ ಹೊಂದಿದೆ. ಈ ಹಿಂದೆ ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಮಂಡಲ ಆಯೋಗದ ವರದಿಯನ್ನು ಜಾರಿಗೆ ತರಲು ಕ್ರಮ ಕೈಗೊಂಡರು. ಆಗ ಲಾಲ್‍ಕೃಷ್ಣ ಅಡ್ವಾಣಿ ಅವರು ಕಮಂಡಲವನ್ನು ಕೈಗೆತ್ತಿಕೊಂಡು ರಾಮ ಮಂದಿರ ನಿರ್ಮಾಣದ ರಥಯಾತ್ರೆಯನ್ನು ಆರಂಭಿಸಿದರು. ಸೋಮನಾಥ ದೇವಾಲಯದಿಂದ ಆರಂಭಿಸಲಾದ ಅಡ್ವಾಣಿ ಯಾತ್ರೆಯಲ್ಲಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಜನರಿಗೆ ಭಾವನಾತ್ಮಕವಾಗಿ ಬಡಿದೆಬ್ಬಿಸಿದರು. ಆ ರಥದ ಸೂತ್ರದಾರ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು. ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸಗೊಳಿಸಲಾಯಿತು. ಮೀಸಲಾತಿ ವಿರೋಧಿ ಚಳುವಳಿಯಲ್ಲಿ ಸುಮಾರು 70 ಜನರು ಮೃತಪಟ್ಟರು. ಸಾವಿರಾರು ಜನರು ರಾಮ ಮಂದಿರದ ಸಲುವಾಗಿ ಪ್ರಾಣ ಕಳೆದುಕೊಂಡರು. ಇದಕ್ಕೆಲ್ಲ ಪ್ರಧಾನಿ ಮೋದಿಯೇ ಕಾರಣ ಎಂದು ಅವರು ದೂಷಿಸಿದರು.
ಕೋಮುವಾದ ಬಣ್ಣ ಬಳಿದು ಸಾವಿರಾರು ಜನರ ಸಾವಿಗೆ ಕಾರಣವಾದ ಎಲ್.ಕೆ. ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಲಾಯಿತು ಎಂದು ಆಕ್ಷೇಪಿಸಿದ ಅವರು, ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳಿಗೆ, ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸು ಅವರಿಗೆ ಭಾರತರತ್ನ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಭಾರತರತ್ನ ಕೊಟ್ಟಿದ್ದು ಸ್ವಾಗತಾರ್ಹ ಎಂದರು.
ಮೋದಿಯವರು ಚುನಾವಣೆ ಪ್ರಚಾರಕ್ಕೆ ರಾಜ್ಯಕ್ಕೆ ಬರುವುದಕ್ಕೆ ಯಾವುದೇ ನೈತಿಕತೆ ಇಲ್ಲ. ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕದ ಪಾಲು ಕೊಡಲಿಲ್ಲ. ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳು ಸಿಗಲಿಲ್ಲ ಎಂದು ಹೇಳಿದ ಅವರು, ಕರ್ನಾಟಕವು ಬಸವಣ್ಣನವರ ಸಾಂಸ್ಕøತಿಕ ನಾಯಕನ ನಾಡು ಆಗಿರುವುದರಿಂದ ಮೋದಿ ಅವರ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಖನ್ನಾ, ಸೂರ್ಯಕಾಂತ್ ಆಜಾದಪೂರ್, ಕಪಿಲ್ ಸಿಂಗೆ, ಸೈಬಣ್ಣ ಜೆ. ಕೊಟನೂರಕರ್ ಮುಂತಾದವರು ಉಪಸ್ಥಿತರಿದ್ದರು.