ಬಾಯಿ ಆರೋಗ್ಯ ಕಾಪಾಡಿಕೊಳ್ಳುವುದು ಅಗತ್ಯ
ಕಲಬುರಗಿ:ಮಾ.18: ಸಾಮಾನ್ಯವಾಗಿ ಯಾವುದೇ ಕಾಯಿಲೆಗಳ ಲಕ್ಷಣಗಳು ಕಂಡುಬಂದು ಆಸ್ಪತ್ರೆಗೆ ತೆರಳಿದಾಗ ವೈದ್ಯರು ಮೊದಲು ಬಾಯಿಯನ್ನು ಪರಿಶೀಲಿಸುವರು. ಹಲ್ಲುಗಳು, ನಾಲಿಗೆ, ಗಂಟಲು ಸೇರಿದಂತೆ ಬಾಯಿಯ ಆರೋಗ್ಯದಲ್ಲಿ ಏರು-ಪೇರಾದಾಗ ಅದರ ಪರಿಣಾಮ ದೇಹದ ಇತರೆ ಭಾಗಗಳಿಗೆ ಕೂಡಾ ಆಗುತ್ತದೆ. ಆದ್ದರಿಂದ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ಯುಪಿಎಚ್‍ಸಿಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಬಾಯಿ ಆರೋಗ್ಯ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಹಲ್ಲುಗಳ ರಕ್ಷಣೆಗೆ ದಿನಕ್ಕೆ ಎರಡು ಸಲ ಬ್ರಷ್ ಮಾಡಿ. ಹಲ್ಲುಗಳಲ್ಲಿ ಚೂಪಾದ ವಸ್ತುಗಳನ್ನು ಹಾಕಬಾರದು. ಗುಟಕಾ, ಧೂಮಪಾನ ಸೇವನೆ ಬೇಡ. ಹಲ್ಲುಗಳು, ನಾಲಿಗೆ, ಗಂಟಲಿನ ಸ್ವಚ್ಚತೆಯನ್ನು ಕಾಪಾಡಿಕೊಳ್ಳಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ ಉಗಳಬೇಕು. ತರಕಾರಿ, ಹಣ್ಣುಗಳನ್ನು ಸೇವಿಸಬೇಕು. ಜಂಕ್ ಪುಡ್, ಎಣ್ಣೆಯಲ್ಲಿ ಕರಿದ, ಹುರಿದ ಆಹಾರ ಸೇವನೆ ಮಾಡಬಾರದು. ಬಾಯಿಯ ಆರೋಗ್ಯದಲ್ಲಿ ಏನಾದರು ತೊಂದರೆ ಕಂಡುಬಂದರೆ ತಜ್ಞ ವೈದ್ಯರಿಂದ ಸಲಹೆ, ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಗಂಗಾಜ್ಯೋತಿ ಗಂಜಿ, ರೇಷ್ಮಾ ನಕ್ಕುಂದಿ, ಸಂಗಮ್ಮ ಅತನೂರ್, ಮಂಗಲಾ ಚಂದಾಪುರೆ, ಚಂದ್ರಕಲಾ ಮಠಪತಿ, ಚಂದಮ್ಮ ಮರಾಠಾ, ಅರ್ಚನಾ ಸಿಂಗೆ ಸೇರಿದಂತೆ ಮತ್ತಿತರರಿದ್ದರು.