22 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ
ಬೀದರ್,ಮಾ.18-ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಮಾ.22 ರಂದು ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ ವೃತ್ತದಿಂದ ಭಗತ್ ಸಿಂಗ್ ವೃತ್ತದ ಮಾರ್ಗವಾಗಿ ತಹಸೀಲ್ ಕಚೇರಿಯ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಜಿಲ್ಲೆಯು ಸಂಪೂರ್ಣ ಬರ ಘೋಷಣೆಯಾಗಿ ಸುಮಾರು 6 ತಿಂಗಳಾದರೂ ಇಲ್ಲಿಯವರೆಗೆ ರೈತರ ಖಾತೆಗೆ ಬರ ಪರಿಹಾರ ಜಮೆಯಾಗಿಲ್ಲ. ಸರಕಾರಕ್ಕೆ ಎಕರೆಗೆ ರೂ. 50000/-. ಪರಿಹಾರ ಕೇಳಲಾಗಿತ್ತು. ಆದರೆ ಸರ್ಕಾರ ಪ್ರತಿಯೊಬ್ಬ ರೈತನಿಗೆ ರೂ.2000/- ಮಾತ್ರ ನೀಡಿದೆ. ಇದು ರೈತರಿಗೆ ಮಾಡಿರುವ ಘೋರ ಅವಮಾನ. ಆದಕಾರಣ ಕೂಡಲೇ ಪ್ರತಿ ಹೆಕ್ಟೇರ್‍ಗೆ ರೂ. 50000/ ಪರಿಹಾರ ನೀಡಬೇಕು,
ಬರ ಹಿನ್ನೆಲೆಯಲ್ಲಿ ರೈತನಿಗೆ ಬೆಳೆ ವಿಮೆ ಪರಿಹಾರ 100% ಸಿಗಬೇಕು. ಆದರೆ ಇಲ್ಲಿಯವರೆಗೆ ಒಂದು ನಯಾ ಪೈಸಾ ಕೂಡ ಯಾವ ರೈತನಿಗೆ ಸಿಕ್ಕಿರುವುದಿಲ್ಲ. ಮಾ.21 ರ ಒಳಗಾಗಿ ಬೆಳೆ ವಿಮೆ ಪರಿಹಾರ ಜಮೆ ಮಾಡಬೇಕು, ಕಾರ್ಖಾನೆಗಳಿಗೆ ರೈತರು ಸರಬರಾಜು ಮಾಡಿರುವ ಕಬ್ಬಿನ ಬಿಲ್ಲು ಕಾಯ್ದೆ ಪ್ರಕಾರ 14 ದಿವಸಗಳ ಒಳಗಾಗಿ ರೈತರಿಗೆ ಪಾವತಿಸಬೇಕು. ಆದರೆ 4 ರಿಂದ 5 ತಿಂಗಳು ಗತಿಸಿದರೂ ಕಾರ್ಖಾನೆಗಳು ರೈತರಿಗೆ ಹಣ ಕೊಡುತ್ತಿಲ್ಲ. ತಕ್ಷಣವಾಗಿ ರೈತರಿಗೆ ಬಿಲ್ಲು ಪಾವತಿ ಮಾಡಬೇಕು, ಸತತವಾಗಿ ಬೀದರ ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಅನಾವೃಷ್ಠಿ ಆಗಿರುವುದರಿಂದ ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕೂಡಲೇ ಜಿಲ್ಲೆಯ ಎಲ್ಲಾ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವ ಬಗ್ಗೆ ವರದಿ ಕೊಡಬೇಕು, ಹಿಂದಿನ ರಾಜ್ಯ ಸರ್ಕಾರ ಮುಖ್ಯಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ ರೂ. 4000/- ಕೊಡುತ್ತಿತ್ತು, ಆದರೆ, ಸಿದ್ದರಾಮಯ್ಯ ಸರ್ಕಾರ ಅದನ್ನು ಸ್ಥಗಿತ ಮಾಡಿದ್ದಾರೆ. ಹಿಂದಿನ ಸರ್ಕಾರದಂತೆ ತಕ್ಷಣ ಜಾರಿ ಮಾಡಲು ಸರ್ಕಾರಕ್ಕೆ ರೈತರ ಪರವಾಗಿ ವರದಿ ಸಲ್ಲಿಸಬೇಕು. ಭೂಮಾಪನ ಮಾಡುವ ಫೀಸು ಸರ್ಕಾರ ಹೆಚ್ಚಳ ಮಾಡಿರುವುದರಿಂದ ರೈತರಿಗೆ ಬಹಳ ಹೊರೆಯಾಗುತ್ತಿದ್ದು, ಕಾರಣ ಈ ಕೂಡಲೇ ಮೊದಲಿನ ದರದಲ್ಲಿ ಫೀಸು ಕಡಿಮೆ ಮಾಡಬೇಕು, ವನ್ಯ ಪ್ರಾಣಿಗಳಿಂದ ರೈತರ ಬೆಳೆ ಹಾಳಾಗುತ್ತಿದ್ದು, ತಕ್ಷಣ ಪರ್ಯಾಯ ವ್ಯವಸ್ಥೆ ಹುಡುಕಿ, ಈ ಸಮಸ್ಯೆ ಬಗೆಹರಿಸಬೇಕು. ರೈತರ ತೋಟದ ಮನೆಗಳಿಗೆ ರಾತ್ರಿ ಹೊತ್ತಿನಲ್ಲಿ ವಿದ್ಯುತ್ ಕೊಡುವ ವ್ಯವಸ್ಥೆ ಮಾಡಬೇಕು ಈ ಎಲ್ಲಾ ಬೇಡಿಕೆಗಳನ್ನು ಮಾ. ರ ಒಳಗಾಗಿ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಮಾ.22 ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ಸಂಘದ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪಾ ಅಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸಿರ್ಸಿ ಎಚ್ಚರಿಸಿದ್ದಾರೆ.