ವಿಜಯಪುರ ಮೀಸಲು ಲೋಕಸಭೆ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ: ಡಾ. ಬಾಬುರಾಜೇಂದ್ರ ನಾಯಿಕ
ವಿಜಯಪುರ,ಮಾ.18:ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯುವ ಇಂಗಿತವನ್ನು ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ಬಾಬುರಾಜೇಂದ್ರ ನಾಯಿಕ ಅವರು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತೀಯ ಜನತಾ ಪಾರ್ಟಿಯ ಭದ್ರ ನೆಲೆಯಾಗಿತ್ತು. ವಿಜಯಪುರದ ಜನತೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಿರಂತರವಾಗಿ ಬೆಂಬಲಿಸುತ್ತಾ ಬಂದಿದ್ದಾರೆ. ಕಳೆದ ಮೂರು ಅವಧಿಯಲ್ಲಿ ಸಂಸದರಾಗಿದ್ದವರು ಯಾವುದೇ ಅಭಿವೃದ್ಧಿ ಕೆಲಸ ನಡೆಸದಿದ್ದರೂ, ಮೋದಿಯವರಿಗಾಗಿ ಜನತೆ ಅವರಿಗೆ ಮತ ಚಲಾಯಿಸಿದ್ದಾರೆ. ಆದರೆ, ಈ ಬಾರಿಯಾದರೂ ಅಭ್ಯರ್ಥಿ ಬದಲಾಯಿಸಿ, ವಿಜಯಪುರದ ಅಭಿವೃದ್ಧಿಗೆ ಪಕ್ಷ ನೆರವಾಗಬೇಕು ಎನ್ನುವುದು ಜನತೆಯ ಬೇಡಿಕೆಯಾಗಿತ್ತು. ಅದರಂತೆ, ವಿದ್ಯಾವಂತ, ವೃತ್ತಿಯಿಂದ ವೈದ್ಯ, ಮತ್ತು ಬಂಜಾರಾ ಸಮುದಾಯಕ್ಕೆ ಸೇರಿದ ನನಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ, ನನ್ನ ಬದಲಿಗೆ ಹಾಲಿ ಸಂಸದರಿಗೆ ಪುನಃ ಟಿಕೆಟ್ ಘೋಷಿಸಲಾಗಿದೆ. ಇದು ಸಂಪೂರ್ಣ ವಿಜಯಪುರದ ಜನತೆಗೆ ಆಘಾತಕಾರಿಯಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ.
ಪಕ್ಷದ ಹಿತೈಷಿಗಳು, ನಾಗರಿಕ ಬಂಧುಗಳು, ಕಾರ್ಯಕರ್ತರು ಭಾರತೀಯ ಜನತಾ ಪಾರ್ಟಿಯ ಭದ್ರ ಕೋಟೆಯಾದ ವಿಜಯಪುರ ಕಾಂಗ್ರೆಸ್‍ಗೆ ಸುಲಭ ತುತ್ತಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ, ಇದನ್ನು ತಡೆಯಲು ನೀವು ಸ್ಪರ್ಧಿಸಬೇಕು ಎಂದು ನನ್ನಲ್ಲಿ ಆಗ್ರಹಿಸಿದರು. ನನಗೂ ಈ ವಿಚಾರ ಹೌದು ಎನಿಸಿದ್ದರಿಂದ, ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ನನ್ನ ಸ್ಪರ್ಧೆಯನ್ನು ಬಂಡಾಯ ಸ್ಪರ್ಧೆ ಎಂಬುದಾಗಿ ಮಾಧ್ಯಮಗಳಲ್ಲಿ ಬಿಂಬಿಸಲಾಗಿದೆ. ಆದರೆ ನನ್ನದು ಬಂಡಾಯವಲ್ಲ, ಅನಿವಾರ್ಯತೆಯ ಸ್ಪರ್ಧೆ. ನಾನು ಪ್ರಧಾನಿ ನರೇಂದ್ರ ಮೋದಿಯವರ ಭಕ್ತ. ಶ್ರೀರಾಮನ ಪರವಾಗಿ ಹನುಮಂತ ಕೆಲಸ ಮಾಡಿದಂತೆ, ಪ್ರಧಾನಿ ಮೋದಿಯವರಿಗಾಗಿ ನಾನು ಶ್ರಮಿಸಲು ಸಿದ್ಧನಿದ್ದೇನೆ. ಆದ್ದರಿಂದ, ವಿಜಯಪುರದಲ್ಲಿ ನಾನು ಒಂದು ಸಣ್ಣ ಮಾರ್ಗ ಬದಲಾವಣೆ ಮಾಡಿಕೊಂಡು, ಚುನಾವಣೆಯಲ್ಲಿ ಸ್ಪರ್ಧಿಸಿ, ಜಯ ಸಾಧಿಸುವ ಗುರಿ ಹೊಂದಿದ್ದೇನೆ. ನನ್ನ ಸ್ಪರ್ಧೆ ಖಂಡಿತವಾಗಿಯೂ ಬಂಡಾಯವಲ್ಲ. ನಾನು ಹಿಂದೆಯೂ ಬಿಜೆಪಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ, ಮುಂದೆಯೂ ನಿಷ್ಠಾವಂತ ಕಾರ್ಯಕರ್ತ.ಪಕ್ಷ ಮತ್ತು ಸಂಘಟನೆ ನಮಗೆ ದೇಶಭಕ್ತಿ, ಪಕ್ಷ ನಿಷ್ಠೆ ಮತ್ತು ತಪ್ಪನ್ನು ಪ್ರಶ್ನಿಸುವ ಬೋಧನೆ ಮಾಡಿದೆ. ಕಣ್ಣ ಮುಂದೆ ಓರ್ವ ವ್ಯಕ್ತಿ ತಲೆಮಾರುಗಳ ಕಾಲ ಅಧಿಕಾರಕ್ಕಾಗಿ ಅಂಟಿಕೊಂಡು, ಅನಾರೋಗ್ಯ ಉಂಟಾಗಿದ್ದರೂ ನನಗೆ ಅಧಿಕಾರವೇ ಬೇಕು ಎನ್ನುವಂತೆ ಆಡುವುದನ್ನು ನೋಡಿಕೊಂಡು ಸುಮ್ಮನಿರಲು ಪಕ್ಷ ನಿಷ್ಠರಿಗೆ ಖಂಡಿತಾ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕಾರಣದಿಂದ, ನಾನು ಅನಿವಾರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಿರಿಸಿದ್ದೇನೆ. ಚುನಾವಣೆಯ ಗೆಲುವಿನ ಬಳಿಕ, ನಾನು ಮರಳಿ ಬಿಜೆಪಿಯನ್ನೇ ಬೆಂಬಲಿಸಲಿದ್ದೇನೆ. ಪಕ್ಷವು ಉಮೇದುವಾರಿಕೆಯ ಕುರಿತು ಇನ್ನೊಮ್ಮೆ ಆಲೋಚಿಸಿ, ನಿರ್ಧಾರ ಬದಲಾಯಿಸಿದರೆ ನನ್ನಂತೆ ಲಕ್ಷಾಂತರ ನಿಷ್ಠಾವಂತ ಕಾರ್ಯಕರ್ತರಿಗೆ ಸಮಾಧಾನ ತರಲಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2047ರಲ್ಲಿ ವಿಕಸಿತ ಭಾರತ ಸಾಧಿತವಾಗಬೇಕು ಎಂದು ಕನಸು ಕಾಣುತ್ತಿದ್ದಾರೆ. ಅದರ ಅನುಸಾರ ವಿಕಸಿತ ವಿಜಯಪುರ ನಿರ್ಮಾಣವಾಗಬೇಕು ಎಂಬುದು ನನ್ನ ಕನಸು. ನಿರಂತರ ಮೂರು ಅವಧಿಯಲ್ಲಿ ಸಂಸದರಾಗಿದ್ದು, ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗದ ಸಂಸದರು ಇನ್ನೊಂದು ಅವಧಿಯಲ್ಲಿ ವಿಜಯಪುರದ ಅಭಿವೃದ್ಧಿ ಸಾಧಿಸುವುದು ಅಸಾಧ್ಯ ಎಂಬುದು ಈಗಾಗಲೇ ಸಮಸ್ತ ವಿಜಯಪುರ ನಾಗರಿಕರಿಗೆ ಅರಿವಿಗೆ ಬಂದಿದೆ. ಅವರ ಪ್ರತಿನಿಧಿಯಾಗಿ ನಾನು ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ.
ಇದು ಬಂಡಾಯವಲ್ಲ, ವಿಜಯಪುರದಲ್ಲಿ ಪಕ್ಷದ ಉಳಿವಿಗಾಗಿ, ಊಳಿಗಮಾನ್ಯ ಮನಸ್ಥಿತಿಯ ತಡೆಗಾಗಿ ನಾವು ಇಡುತ್ತಿರುವ ಒಂದು ಹೆಜ್ಜೆ ಆಗಿದೆ ಎಂದಿದ್ದಾರೆ.